ಸಾರಾಂಶ
ರಾಜ್ಯದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದಾದ ಹಾಗೂ ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಆದ ಯುಬಿಡಿಟಿಯಲ್ಲಿ ಶೇ. 50ರಷ್ಟು ಪ್ರಮಾಣದ ಸೀಟ್‌ಗಳಲ್ಲಿ ಶುಲ್ಕ ಏರಿಕೆ ಮಾಡಲಾಗಿದೆ.
ಧಾರವಾಡ:
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಶೇ. 50ರಷ್ಟು ಸೀಟುಗಳನ್ನು ಹೆಚ್ಚಿನ ಶುಲ್ಕಕ್ಕೆ ಮಾರುವ ನಿರ್ಧಾರ ಕೈಬಿಡಬೇಕು ಹಾಗೂ ಧಾರವಾಡದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಜೇಶನ್ (ಎಐಡಿಎಸ್‌ಒ) ನಗರದ ವಿವೇಕಾನಂದ ವೃತ್ತದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿತು.ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್. ಮಾತನಾಡಿ, ಒಂದು ತಿಂಗಳಿಂದ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದಾದ ಹಾಗೂ ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಆದ ಯುಬಿಡಿಟಿಯಲ್ಲಿ ಶೇ. 50ರಷ್ಟು ಪ್ರಮಾಣದ ಸೀಟ್‌ಗಳಲ್ಲಿ ಶುಲ್ಕ ಏರಿಕೆ ಮಾಡಲಾಗಿದೆ. ಸರ್ಕಾರಿ ಎಂಜಿನಿಯರಿಂಗ್ ಶುಲ್ಕವೇ ₹ 43 ಸಾವಿರ ಇದ್ದು, ಬಡ ವಿದ್ಯಾರ್ಥಿಗಳಿಗೆ ಇದನ್ನು ಭರಿಸಲು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ₹ 97 ಸಾವಿರ ಶುಲ್ಕ ಪಡೆಯುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇದೇ ರೀತಿ ಬೆಂಗಳೂರಿನ ಪ್ರತಿಷ್ಠಿತ ಯುವಿಸಿಇ ಕಾಲೇಜ್ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಏರಿಸುವ ಹಾಗೂ ಕಾಲೇಜು ನಿರ್ವಹಣೆಗೆ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದರು.ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಯುಬಿಡಿಟಿ ಕಾಲೇಜಿನಲ್ಲಿ ಶೇ. 50 ಹೆಚ್ಚುವರಿ ಶುಲ್ಕ ಕೈಬಿಡಬೇಕು ಹಾಗೂ ಈ ವರ್ಷ ಪಡೆದಿರುವ ಹೆಚ್ಚುವರಿ ಹಣ ಹಿಂದಿರುಗಿಸಬೇಕು. ಬಡ ವಿದ್ಯಾರ್ಥಿಗಳ ಪರ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, ‘ರಾಜ್ಯದ ಶಿಕ್ಷಣ ಕಾಶಿ’ಯೆಂದೇ ಹೆಸರಾಗಿರುವ ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಹಾಗೂ ರಾಜ್ಯದ ಎಲ್ಲ ಸರ್ಕಾರಿ ಹಾಗೂ ವಿವಿಯ ಅಡಿ ಬರುವ ಎಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕು ಎಂದು ಮನವಿ ಮಾಡಿದರು.ಸಂಘಟನೆ ಜಿಲ್ಲಾಧ್ಯಕ್ಷೆ ಸಿಂಧು ಕೌದಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.