ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ರಥೋತ್ಸವ ವೈಭವ

| N/A | Published : Mar 03 2025, 01:46 AM IST / Updated: Mar 03 2025, 01:03 PM IST

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ರಥೋತ್ಸವ ವೈಭವ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

 ಕಳಸ : ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಭಾನುವಾರ ಬೆಳಿಗ್ಗೆ ಪೂಜೆಯ ನಂತರ ಉತ್ಸವ ಮೂರ್ತಿಯ ಸುತ್ತು ಸೇವೆ ನಡೆಯಿತು. ಬಳಿಕ, ಛತ್ರ, ಚಾಮರಾದಿ ಮಂಗಳವಾದ್ಯಗಳೊಂದಿಗೆ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿದ ದೇವಿಯ ಉತ್ಸವ ಮೂರ್ತಿಯನ್ನು ಸುಂದರವಾಗಿ ಅಲಂಕರಿಸಿದ ಬ್ರಹ್ಮರಥದಲ್ಲಿ ಕುಳ್ಳಿರಿಸಿ, ಪೂಜೆ ಮಾಡಲಾಯಿತು. ಬಳಿಕ, ಅಲಂಕೃತಗೊಂಡ ಭವ್ಯ ಬ್ರಹ್ಮರಥವನ್ನು ಶ್ವೇತ ವಸ್ತ್ರಧಾರಿಗಳಾದ ಭಕ್ತಾದಿಗಳು ಎಳೆದರು. ರಥವೇರಿ ಕುಳಿತ ದೇವರ ಮೂರ್ತಿ ತನ್ಮಯವಾಗಿ, ಚಿನ್ಮಯ ಮೂರ್ತಿಯಾಗಿ ಕಂಗೊಳಿಸುತ್ತಿತ್ತು. ಈ ಸುಂದರ ದೃಶ್ಯವನ್ನು ಭಕ್ತರು ಭಕ್ತಿಯಿಂದ ಕಣ್ತುಂಬಿಸಿಕೊಂಡರು.

ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ವರ್ಷವಿಡಿ ದೇವಿ ಗರ್ಭಗುಡಿಯಲ್ಲಿದ್ದು, ಭಕ್ತರಿಗೆ ದರ್ಶನ ಕೊಡುತ್ತಾಳೆ. ರಥೋತ್ಸವದ ವಿಶೇಷ ದಿನದಲ್ಲಿ ಜಗನ್ಮಾತೆ ಹೊರ ಬಂದು ದಿವ್ಯ ರಥದಲ್ಲಿ ಕುಳಿತು, ಭಕ್ತರಿಗೆ ದರ್ಶನ ನೀಡುತ್ತಾಳೆ. ಇದುವೇ ರಥೋತ್ಸವದ ವಿಶೇಷ ಎಂದು ತಿಳಿಸಿದರು.

ರಥೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಅಮ್ಮನ ದರ್ಶನ ಪಡೆದರು. ರಾಜಲಕ್ಷೀ ಬಿ.ಜೋಷಿ ಮತ್ತು ಕುಟುಂಬ ವರ್ಗದವರು ಮಹಿಳೆಯರಿಗೆ ಬಳೆ ಮತ್ತು ರವಿಕೆ ಕಣವನ್ನು ವಿತರಿಸಿದರು. ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರೀಜಾ ಶಂಕರ್ ಜೋಷಿ ಕುಟುಂಬ ಪಾಲ್ಗೊಂಡು ರಥೋತ್ಸವವನ್ನು ಯಶಸ್ವಿಗೊಳಿಸಿದರು.