ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿಯ ಶಿಕ್ಷಕಿ ನಿರಂತರ ಗೈರು ಹಾಜರಾಗುತ್ತಿದ್ದು ಈ ಬಗ್ಗೆ ಬೇಸರಗೊಂಡ ಮಕ್ಕಳ ಪೋಷಕರು, ಸ್ಥಳೀಯ ಅಂಗನವಾಡಿ ಗೇಟಿಗೆ ಬೀಗಜಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ಮಂಗಳವಾರ ಪಾಲೆಮಾಡಿನಲ್ಲಿ ಜರುಗಿದೆ .ಹೊದ್ದೂರು ಗ್ರಾಮ ಪಂಚಾಯಿತಿಯ ಪಾಲೆಮಾಡಿನಲ್ಲಿರುವ ಅಂಗನವಾಡಿ ಕೇಂದ್ರದ ಶಿಕ್ಷಕಿ ಅಂಗನವಾಡಿಗೆ ಸರಿಯಾಗಿ ಬಾರದೆ ಇದ್ದುದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಮಕ್ಕಳಿಗೆ ಹುಳು ಹುಪ್ಪಟೆ ಗಳಿರುವ ತಿನ್ನಲು ಯೋಗ್ಯ ಅವಧಿ ಮೀರಿದ ಆಹಾರವನ್ನು ನೀಡಲಾಗುತ್ತಿದೆ ಎಂದು ಪೋಷಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಬಳಿಕ ಅಂಗನವಾಡಿ ಕೇಂದ್ರದ ಗೇಟಿಗೆ ಬೀಗ ಹಾಕಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
ಈ ಬಗ್ಗೆ ಇತ್ತೀಚೆಗೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಶಾಸಕರಿಗೆ, ಅಧ್ಯಕ್ಷರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ನಡೆಸಲು ಸಂಬಂಧಪಟ್ಟವರಿಂದ ಸಾಧ್ಯವಿಲ್ಲದಿದ್ದರೆ ತಿಳಿಸಿ ಬಂದ್ ಮಾಡಿ ಮಕ್ಕಳನ್ನು ಬೇರೆ ಕಡೆಗೆ ಕಳಿಸುವ, ಎಲ್ಲ ಸಮಸ್ಯೆಗಳಿಗಾಗಿ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ (ಸಿಡಿಪಿಓ) ಅವರ ನಿರ್ಲಕ್ಷತನ ಹಾಗೂ ಶಿಕ್ಷಕಿಯ ಬೇಜವಾಬ್ದಾರಿತನ ಆಗಿರುವುದರಿಂದ ಕೂಡಲೇ ಇವರನ್ನು ಕರ್ತವ್ಯ ದಿಂದ ವಜಾಗೊಳಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಮೊನ್ನಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳೀಯ ನಿವಾಸಿ ಸಂಗೀತ ಮಾತನಾಡಿ, ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕರೆತಂದು ಪ್ರತಿದಿನ ವಾಪಸ್ಸು ಕರೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ದೂರಿದರು.
ಸ್ಥಳೀಯ ನಿವಾಸಿ ಪಾರ್ವತಿ ಪ್ರತಿಕ್ರಿಯಿಸಿ ಆಹಾರ ತೆಗೆದುಕೊಳ್ಳಲು ಬರುವಂತೆ ಪೋಷಕರಿಗೆ ಕರೆ ನೀಡಲಾಗುತ್ತಿದೆ. ಆದರೆ ಸ್ಥಳಕ್ಕೆ ಆಗಮಿಸಿದ ಪೋಷಕರಿಗೆ ಆಹಾರ ಸಿಗುತ್ತಿಲ್ಲ ,ಆಹಾರ ತಿನ್ನಲು ಯೋಗ್ಯವಾಗಿರುವುದಿಲ್ಲ ಎಂದರು.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿಎ ಕುಸುಮಾವತಿ ಮಾತನಾಡಿ, 2008ರಿಂದ ಇಲ್ಲಿ ಅಂಗನವಾಡಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಆರಂಭದಲ್ಲಿ ಸ್ಥಳೀಯರೇ ಅಂಗನವಾಡಿಯ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. 2020ರಲ್ಲಿ ಸರ್ಕಾರ ಮಟ್ಟಕ್ಕೆ ಹೋದ ನಂತರ ಶಿಕ್ಷಕರ ನೇಮಕವಾಗಿದೆ. ಆದರೆ ಶಿಕ್ಷಕಿಯ ಬೇಜವಾಬ್ದಾರಿತನದಿಂದ ಬರುತ್ತಿರುವ ಮಕ್ಕಳ ಸಂಖ್ಯೆ ಕ್ಷೀಣಿಸಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದರು ಪ್ರಯೋಜನ ಆಗಿಲ್ಲ. ಸರ್ಕಾರ ತಕ್ಷಣ ಶಾಶ್ವತವಾದ ಶಿಕ್ಷಕಿಯನ್ನು ನೇಮಕ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.