ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಯುವ ಸಭೆಗಳಿಗೆ ಕೆಲವು ಇಲಾಖಾಧಿಕಾರಿಗಳು ನಿರಂತರವಾಗಿ ಗೈರು ಹಾಜರಾಗುತ್ತಿದ್ದು ಕಾರಣ ಕೇಳಿ ನೋಟಿಸ್‌ ನೀಡಲಾಗುವುದೆಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಯುವ ಸಭೆಗಳಿಗೆ ಕೆಲವು ಇಲಾಖಾಧಿಕಾರಿಗಳು ನಿರಂತರವಾಗಿ ಗೈರು ಹಾಜರಾಗುತ್ತಿದ್ದು ಕಾರಣ ಕೇಳಿ ನೋಟಿಸ್‌ ನೀಡಲಾಗುವುದೆಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಎಚ್ಚರಿಕೆ ನೀಡಿದರು.

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ಪೂರ್ವಭಾವಿ ಸಭೆಯಲ್ಲಿ ಇದೇ ರೀತಿ ಪುನರಾವರ್ತನೆಯಾದರೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದರು.

ಕನ್ನಡ ರಾಜ್ಯೋತ್ಸವ ದಿನದಂದು ವಿವಿಧ ಶಾಲಾ ತಂಡಗಳ ಸ್ತಬ್ಧಚಿತ್ರಗಳು ಬೆಳಗ್ಗೆ 9 ಗಂಟೆಗೆ ಜೇಸೀ ವೇದಿಕೆ ಬಳಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಕ್ಕೆ ತೆರಳಬೇಕು. ಶಾಲಾ ಮಕ್ಕಳಿಗೆ ಕುಡಿಯುವ ನೀರು ಮತ್ತು ಲಘು ಉಪಾಹಾರದ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕಾಗಿದೆ ಎಂದು ತಹಸೀಲ್ದಾರ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದೇ ಸಂದರ್ಭ ಕನ್ನಡ ನಾಡು, ನುಡಿ, ಸಾಹಿತ್ಯ ಸೇವೆ ಪರಿಗಣಿಸಿ ಈರ್ವರು ಸಾಧಕರಿಗೆ ಸನ್ಮಾನ ಮಾಡಲಾಗುವುದೆಂದು ತಹಸೀಲ್ದಾರ್ ಸಭೆಗೆ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್.ಡಿ.ವಿಜೇತ್, ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಸಲಹೆ-ಸೂಚನೆ ನೀಡಿದರು.