ಬಜೆಟ್‌ ಪೂರ್ವಭಾವಿ ಸಭೆಗೆ ಜನಪ್ರತಿನಿಧಿಗಳ ನಿರಾಸಕ್ತಿ

| Published : Jan 11 2025, 12:49 AM IST

ಸಾರಾಂಶ

ಸಾರ್ವಜನಿಕರ ಬಜೆಟ್ ಪೂರ್ವಭಾವಿ ಸಭೆಗೆ ಬಹಳಷ್ಟು ಸದಸ್ಯರು ಗೈರು ಹಾಜರಾಗಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ. ಪಿ.ಶಂಕರ್, 17 ಸದಸ್ಯರಲ್ಲಿ 7 ಮಂದಿ ಮಾತ್ರ ಸಭೆಗೆ ಹಾಜರಾಗಿದ್ದಾರೆ. ಸದಸ್ಯರ ಗೈರುಹಾಜರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ, ಸಾರ್ವಜನಿಕರಿಂದ ಬಂದಿರುವ ಆಕ್ಷೇಪಗಳ ಕುರಿತು ನಿರ್ಣಯ ಕೈಗೊಂಡು ಸಾಮಾನ್ಯ ಸಭೆಯಲ್ಲಿ ಜನರ ಭಾವನೆಗಳ ಕುರಿತು ಸದಸ್ಯರಿಗೆ ಮನವರಿಕೆ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಶುಕ್ರವಾರ ನಡೆದ ಸಾರ್ವಜನಿಕರ ಬಜೆಟ್ ಪೂರ್ವಭಾವಿ ಸಭೆಗೆ ಬಹಳಷ್ಟು ಸದಸ್ಯರು ಗೈರು ಹಾಜರಾಗಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವಕೀಲ ಶಂಕರಯ್ಯ ಮಾತನಾಡಿ, ಹಿಂದಿನ ಸಭೆಯಲ್ಲಿ ಸದಸ್ಯರು ಹಾಜರಿಲ್ಲದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಇಂದಿನ ಸಭೆಗೆ ಇನ್ನೂ ಕಡಿಮೆ ಸಂಖ್ಯೆಯಲ್ಲಿ ಸದಸ್ಯರು ಬಂದಿದ್ದಾರೆ. ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಸಮಸ್ಯೆ ಕುರಿತು ಎಷ್ಟರಮಟ್ಟಿನ ಕಾಳಜಿ ಇದೆ ಎಂಬುದನ್ನು ಇದು ತೋರಿಸುತ್ತದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕ್ರೀಡಾಂಗಣ ಹೆಸರಿಗಷ್ಟೇ ಇದೆ, ಯಾವುದೇ ಮೂಲ ಸೌಕರ್ಯಗಳಿಲ್ಲ, ಯುಜಿಡಿ ಕಾಮಗಾರಿ ಸ್ಥಗಿತಗೊಂಡಿದೆ. ಬೀದಿನಾಯಿಗಳ ಹಾವಳಿ ಹೆಚ್ಚಿದೆ, ಹಳೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಪಪಂ ವ್ಯಾಪ್ತಿಯ ಕೆರೆಗಳು ಅಭಿವೃದ್ಧಿ ಕಂಡಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡುವಂತೆ ಸಲಹೆ ನೀಡಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ. ಪಿ.ಶಂಕರ್, 17 ಸದಸ್ಯರಲ್ಲಿ 7 ಮಂದಿ ಮಾತ್ರ ಸಭೆಗೆ ಹಾಜರಾಗಿದ್ದಾರೆ. ಸದಸ್ಯರ ಗೈರುಹಾಜರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ, ಸಾರ್ವಜನಿಕರಿಂದ ಬಂದಿರುವ ಆಕ್ಷೇಪಗಳ ಕುರಿತು ನಿರ್ಣಯ ಕೈಗೊಂಡು ಸಾಮಾನ್ಯ ಸಭೆಯಲ್ಲಿ ಜನರ ಭಾವನೆಗಳ ಕುರಿತು ಸದಸ್ಯರಿಗೆ ಮನವರಿಕೆ ಮಾಡಬೇಕು ಎಂದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಪಿ.ಎನ್ .ರಂಗನಾಥ್, ಅಧ್ಯಕ್ಷರು ಮತ್ತು ಸದಸ್ಯರು ವಾರ್ಡ್ ಭೇಟಿ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಸದಸ್ಯ ರಮೇಶ್ ವಾಟಾಳ್ ಗಣಪತಿ ಕೊತ್ತಲು ಉದ್ಯಾನ ಐತಿಹಾಸಿಕ ಮಹತ್ವ ಹೊಂದಿದ್ದು, ಇದರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು, ಹಳೆಯ ಬಸ್ ನಿಲ್ದಾಣದ ಜಾಗವನ್ನು ರಸ್ತೆ ಸಾರಿಗೆ ಸಂಸ್ಥೆಯಿಂದ ಪಪಂ ವಾಪಸ್ ಪಡೆದು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಆದಾಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಸದಸ್ಯ ಅನಿಕೇತನ್, ತಾಲೂಕು ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಮೇಲ್ಛಾವಣಿ ಕಾಮಗಾರಿ ಪೂರ್ಣಗೊಳಿಸಲು ಮುಂದಿನ ಬಜೆಟ್‌ನಲ್ಲಿ ಹಣ ಒದಗಿಸಬೇಕು. ಪಟ್ಟಣದ ವಿವಿಧ ಬಡಾವಣೆಗಳಿಗೆ ಮಹನೀಯರ ಹೆಸರನ್ನು ನಾಮಕರಣ ಮಾಡುವಂತೆ ಸಲಹೆ ಮಾಡಿದರು. ಪಪಂ ಮಾಜಿ ಉಪಾಧ್ಯಕ್ಷ ಎ. ಪಿ. ರಮೇಶ್, ಸಭೆಯಲ್ಲಿ ನೀಡಿದ ಸಲಹೆಗಳು ಅನುಷ್ಠಾನಗೊಳ್ಳುತ್ತಿಲ್ಲ, ರಸ್ತೆ, ಬೀದಿದೀಪ, ಕುಡಿಯುವ ನೀರು ಮುಂತಾದ ಮೂಲಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದರು.

ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಬೀಡಾಡಿ ದನಗಳನ್ನು ಹಿಡಿದು ಗೋ ಶಾಲೆಗೆ ಬಿಡುವುದು, ಫುಡ್‌ಪಾರ್ಕ್‌ ನಿರ್ಮಾಣ, ಪಪಂಗೆ ನೂತನ ಕಚೇರಿ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಸಲಹೆಗಳನ್ನು ಸದಸ್ಯರು ಮತ್ತು ಸಾರ್ವಜನಿಕರು ನೀಡಿದರು.ಅಧ್ಯಕ್ಷ ಪ್ರದೀಪ್ ಕುಮಾರ್‌ ಮಾತನಾಡಿ, ಕಳೆದ ಎರಡೂ ಸಭೆಗಳಲ್ಲಿ ಸಾರ್ವಜನಿಕರಿಂದ ಹಲವು ಸಲಹೆಗಳು ಬಂದಿದೆ. ಈ ಕುರಿತು ಪರಿಶೀಲಿಸಿ ಮುಂದಿನ ಬಜೆಟ್‌ನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಪಂ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ ಎಂದರು. ಸದಸ್ಯರಾದ ಹೂವಣ್ಣ, ಕೃಷ್ಣಯ್ಯ, ದಸಂಸ ಮುಖಂಡ ಸಣ್ಣಸ್ವಾಮಿ, ಉದ್ಯಮಿ ರಾಜೇಂದ್ರ ಕುಮಾರ್ ಜೈನ್ ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು. ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಉಪಸ್ಥಿತರಿದ್ದರು.