ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಇಲ್ಲದೇ ಇರುವುದರಿಂದ ಪಟ್ಟಣದ ಅಭಿವೃದ್ಧಿಗೆ ಸರ್ಕಾರ ನೀಡಿರುವ ಕೋಟ್ಯಂತರ ಅನುದಾನವನ್ನು ಮುಖ್ಯಾಧಿಕಾರಿಗಳು ಪಪಂ ಸದಸ್ಯರ ಗಮನಕ್ಕೆ ತರದೇ ಸದ್ಯ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ಅನಿಲ ಬಡಿಗೇರ ಅವರ ಗಮನಕ್ಕೂ ತರದೇ ಅನುದಾನ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ ಗಂಭೀರ ಆರೋಪ ಮಾಡಿದರು.
ಶನಿವಾರ ಪಪಂ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ೨೦೨೪-೨೫ನೇ ಸಾಲಿನ ಬಜೆಟ್ ಅಂದಾಜು ಪತ್ರಿಕೆ ತಯಾರಿಸಲು ಸಲಹಾ ಸೂಚನೆ ನೀಡುವ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಲಿಖಿತ ದಾಖಲೆ ಪ್ರದರ್ಶಿಸಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಆರೋಪಿಸಿದರು.ಪಟ್ಟಣ ಪಂಚಾಯ್ತಿ ಅಡಿ ಸಾರ್ವಜನಿಕರ ಯಾವುದೇ ಪ್ರಗತಿ ಕಾರ್ಯಗಳು ಆಗುತ್ತಿಲ್ಲ. ಅವ್ಯವಹಾರ ಹಾಗೂ ಅನ್ಯಾಯ ಜರುಗಿದರೂ ತಹಸೀಲ್ದಾರ್ (ಆಡಳಿತಾಧಿಕಾರಿ) ಯಾವುದೇ ಕ್ರಮ ಕೈಗೊಂಡಿಲ್ಲ. ಬರೀ ಪರಿಶೀಲನೆ ಮಾಡಲಾಗುವುದು ಎಂದು ಹಾರಿಕೆ ಉತ್ತರ ನೀಡುತ್ತಾ ಸಮಜಾಯಿಸುತ್ತಾರೆ. ಇವರೆಲ್ಲರ ನಡೆ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವಂತಿದೆ ಎಂದು ಆರೋಪಿಸಿದರು.
ಪಟ್ಟಣ ಪಂಚಾಯ್ತಿ ಅಡಿಯಲ್ಲಿ ಸದಸ್ಯರ ಗಮನಕ್ಕೆ ಬಾರದೇ ಕೋಟ್ಯಂತರ ಬಿಲ್‌ಗಳ ಸಂದಾಯವಾಗಿದೆ. ಕೆಲವೆಡೆ ಕಾಮಗಾರಿ ನಡೆಯದಿದ್ದರೂ ಬಿಲ್‌ಗಳನ್ನು ಪಾವತಿಸಲಾಗಿದೆ. ಮುಖ್ಯಾಧಿಕಾರಿಗಳು ಸಂಪೂರ್ಣವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂಬ ಆಕ್ರೋಶವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿ ಪೂರ್ವಭಾವಿ ಸಭೆ ಆರಂಭಕ್ಕೂ ಮುನ್ನವೇ ಸಭೆಯಿಂದ ಎದ್ದುಹೋದ ಘಟನೆ ಜರುಗಿತು.ಮುಖ್ಯಾಧಿಕಾರಿಯಿಂದ ನೋಟಿಸ್ ಜಾರಿ:
ಶಿರಹಟ್ಟಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ಸ್ಟೋನ್ ಕ್ರಷರ್‌ಗಳಲ್ಲಿ ನಾಲ್ಕು ಅನಧಿಕೃತವಾಗಿದ್ದು, ಅದರಲ್ಲಿ ಒಂದು ಮಾತ್ರ ಅಧಿಕೃತ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ನಿತ್ಯ ಕಾನೂನು ಬಾಹೀರ ಚಟುವಟಿಕೆ ನಡೆಸುತ್ತಿರುವ ಕ್ರಷರ್ ಮಾಲೀಕರಿಗೆ ನೋಟಿಸ್ ನೀಡಿದ್ದು, ಇದೇ ವ್ಯವಸ್ಥೆ ಮುಂದುವರೆದರೆ ಕಾನೂನು ಕ್ರಮಕ್ಕೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ತಿಳಿಸಿದರು.ಪ್ರತಿ ಭಾನುವಾರ ನಡೆಯುವ ಸಂತೆಕರ ಹಾಗೂ ವಾಣಿಜ್ಯ ಮಳಿಗೆಗಳ ಟೆಂಡರ್ ಕರೆದು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮುಖ್ಯವಾಗಿ ಪಟ್ಟಣದ ತುಂಬೆಲ್ಲ ಪಂಚಾಯ್ತಿ ಪರವಾನಗಿ ಪಡೆಯದೇ ಪ್ಲೆಕ್ಸ್, ಬ್ಯಾನರ್ ಕಟ್ಟುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ನೀಡಿದರು.
ನಿಯಮಗಳು ಇಲ್ಲದೇ ಇರುವುದರಿಂದ ಪಟ್ಟಣದ ತುಂಬೆಲ್ಲ ಯರ‍್ರಾಬಿರ‍್ರಿಯಾಗಿ ಬ್ಯಾನರ್‌ಗಳು ರಾರಾಜಿಸುತ್ತಿವೆ. ಪಂಚಾಯ್ತಿಗೂ ಇದರಿಂದ ಲಾಭವಿಲ್ಲ. ಪ್ಲೆಕ್ಸ್, ಬ್ಯಾನರ್ ಕಟ್ಟುವವರಿಗೆ ಪಂಚಾಯ್ತಿ ಪರವಾನಗಿ ಪಡೆದರೆ ಪಟ್ಟಣ ಪಂಚಾಯ್ತಿಗೆ ಲಾಭವಾಗುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆದಾಯದ ಮೂಲಕ್ಕೆ ಆದ್ಯತೆ ನೀಡಬೇಕು ಎಂದು ತಹಸೀಲ್ದಾರ್ ಸೂಚನೆ ನೀಡಿದರು. ಇದಕ್ಕೂ ಬಗ್ಗದಿದ್ದರೆ ನಿಯಮಾನುಸಾರ ಬ್ಯಾನರ್ ಕಟ್ಟಿದವರಿಂದ ತಪ್ಪದೇ ದಂಡ ವಸೂಲಿ ಮಾಡಬೇಕೆಂದು ತಾಕೀತು ಮಾಡಿದರು.ಕಳೆದ ತಿಂಗಳು ಜರುಗಿದ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ರು. ೭೦ ಸಾವಿರ ಉಳಿದಿದ್ದು, ಪಟ್ಟಣ ಪಂಚಾಯ್ತಿ ಅಡಿಯಲ್ಲಿ ಕನಿಷ್ಠ ಒಂದು ಲಕ್ಷ ರು.ಗಳನ್ನು ಒದಗಿಸಿದರೆ ಪಟ್ಟಣದ ಹೊರವಲಯದಲ್ಲಿ ಬೃಹತ್ ಮಹದ್ವಾರ ನಿರ್ಮಾಣ ಮಾಡಲು ಅನುಕೂಲವಾಗುವುದು. ಈ ನಿಟ್ಟಿನಲ್ಲಿ ನನ್ನ ಸಲಹೆಯನ್ನು ಪರಿಗಣಿಸಬೇಕು ಎಂದು ನಿವೃತ್ತ ಶಿಕ್ಷಕ ಜೆ.ಆರ್. ಕುಲಕರ್ಣಿ ಹೇಳಿದರು. ಪಂಚಾಯಿತಿ ಸಿಬ್ಬಂದಿ ಮಂಜುನಾಥ ಪಾತಾಳೆ ಬಜೆಟ್ ಅಯವ್ಯಯ ಕುರಿತು ವರದಿ ಮಂಡಿಸಿದರು.ಶಿರಹಟ್ಟಿ ಪತ್ರಕರ್ತರ ಬಹುದಿನಗಳ ಬೇಡಿಕೆಯಾದ ಪತ್ರಕರ್ತರ ಭವನ ಸ್ಥಳಕ್ಕಾಗಿ ಎರಡು ದಶಕಗಳಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಾರಿಯ ಆಯವ್ಯಯ ಬಜೆಟ್‌ನಲ್ಲಿ ಪತ್ರಕರ್ತರ ಭವನಕ್ಕಾಗಿ ಸ್ಥಳ ನಿಗಧಿ ಮಾಡಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕೆಂದು ಪತ್ರಕರ್ತರು ತಹಸೀಲ್ದಾರ್ ಹಾಗೂ ಮುಖ್ಯಾಧಿಕಾರಿಗಳ ಗಮನ ಸೆಳೆದರು.
ಪಪಂ ಸದಸ್ಯ ಪರಮೇಶ ಪರಬ, ಗಂಗಮ್ಮ ಆಲೂರ, ಇಸಾಕಅಹ್ಮದ ಆದ್ರಳ್ಳಿ, ದೇವಪ್ಪ ಆಡೂರ, ಹೊನ್ನಪ್ಪ ಶಿರಹಟ್ಟಿ, ಶಿವಕುಮರ ಕಪ್ಪತ್ತನವರ, ಹಸರತ ಡಾಲಾಯತ, ಮುಸ್ತಾಕ ಚೋರಗಸ್ತಿ, ನೀಲವ್ವ ಹುಬ್ಬಳ್ಳಿ, ದಾವಲಬಿ ಮಾಚೇನಹಳ್ಳಿ ಅಭಿಯಂತರ ವಿ.ಪಿ. ಕಾಟೇವಾಲೆ, ಸೇರಿ ಅನೇಕರು ಇದ್ದರು.