ಪೊಲೀಸ್ ವೃತ್ತ ನಿರೀಕ್ಷಕ ರವರ ದೌರ್ಜನ್ಯ ಖಂಡಿಸಿ, ಕಳಪೆ ಕಾಮಗಾರಿ ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ತಾಲೂಕು ಅಡಳಿತವನ್ನು ತಮ್ಮ ಬಿಗಿಮುಷ್ಠಿಯಲ್ಲಿರಿಸಿಕೊಂಡು ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದ್ದಾರೆ.ನಾಗರಿಕ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆ, ದಲಿತ ಸಂಘರ್ಷ ಸಮಿತಿ, ರೈತ ಹೋರಾಟ ವೇದಿಕೆ, ತರೀಕೆರೆ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಸೋಮವಾರ ಪೊಲೀಸ್ ವೃತ್ತ ನಿರೀಕ್ಷಿಕ ರವರ ದೌರ್ಜನ್ಯ ಖಂಡಿಸಿ ಹಾಗೂ ಕಳಪೆ ಕಾಮಗಾರಿ ವಿರೋಧಿಸಿ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದ ಬಳಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡುತ್ತಿದ್ದರು.ಕಳೆದ ಮೂರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ. ರಸ್ತೆ ಕಾಮಗಾರಿ, ಬಸ್ ಸ್ಟ್ಯಾಂಡ್ ಕಳಪೆ ಕಾಮಗಾರಿ ಆಗಿದೆ. ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಮೌಲಾನ ಆಜಾದ್ ಸರ್ಕಾರಿ ಶಾಲಾ ಕಟ್ಟಡಕ್ಕೆ ಬಳಸಿರುವ ಸಾಮಗ್ರಿ ಕಳಪೆಯಾಗಿದೆ. ಜನಪ್ರತಿನಿಧಿ ಮತ್ತು ನಾಗರಿಕರಿಗೆ ಈ ಕಳಪೆ ಕಾಮಗಾರಿ ಪ್ರಶ್ನಿಸುವ ಹಕ್ಕು ಇದೆ. ಪೊಲೀಸರು ಮಧ್ಯಪ್ರವೇಶಿಸಿ ದೌರ್ಜನ್ಯ ನಡೆಸುವ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ತಾಲೂಕಿನಲ್ಲಿ ಮದ್ಯದಂಗಡಿಗಳು ಹೆಚ್ಚಾಗುತ್ತಿದ್ದು ಅದರಲ್ಲಿ ಪಾಲುದಾರಿಕೆ ಇದೆ.ಅಂದರ್ ಬಾಹರ್ ಅಟ ಹೆಚ್ಚಾಗುತ್ತಿದೆ, ಬಿ.ಎಚ್.ರಸ್ತೆ ಕಾಮಗಾರಿ ಸಂದರ್ಬದಲ್ಲಿ ಬಿ.ಎಚ್. ರಸ್ತೆಯಲ್ಲಿ ವಿದ್ಯುತ್ ಕಂಬಗಳ ಕಾಪರ್ ವೈರುಗಳು ಏನಾಯಿತು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್ ಮಾತನಾಡಿ ಪಟ್ಟಣದಲ್ಲಿ ಎರಡು ವರ್ಷಗಳಿಂದ ಬಿ.ಎಚ್.ರಸ್ತೆ ಕಾಮಗಾರಿ ತುಂಬಾ ನಿಧಾನವಾಗಿಲ್ಲಿ ಸಾಗುತ್ತಿದೆ. ಕಳಪೆ ಕಾಮಗಾರಿಯಿಂದ ಕೂಡಿದೆ. ರಸ್ತೆ ಕಾಂಕ್ರಿಟ್ ಈಗಾಗಲೇ ಅನೇಕ ಕಡೆ ಕಿತ್ತು ಹೋಗುತ್ತಿದೆ. ಶಾಸಕರು ಮಾತ್ರವಲ್ಲದೆ ಅವರ ಕುಟುಂಬ ಕೂಡ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು ಬಿಜೆಪಿ ಸರ್ಕಾರ ಕೈಗೊಂಡಿದ್ದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೆಂದು ಶಾಸಕರು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಮೌಲಾನ ಆಜಾದ್ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣ ಕಳಪೆ ಕಾಮಗಾರಿ ಪ್ರಶ್ನಿಸಿದ ಜನಪ್ರತಿನಿಧಿಗಳ ಮೇಲೆ ಪೊಲೀಸ್ ವೃತ್ತ ನಿರೀಕ್ಷಿಕರವರು ಅವಹೇಳನಕಾರಿ ಯಾಗಿ ಮಾತಾಡಿದ್ದಾರೆ. ಅವರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿದೆ. ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ನಡೆಯುತ್ತಿರುವ ಅನೇಕ ಕಾಮಗಾರಿಗಳು ಕಳಪೆಯಾಗಿದೆ. ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು ಶಾಲಾ ಕಟ್ಟಡಗಳು ಕಳಪೆಯಾಗಿದ್ದರೆ ವಿದ್ಯಾರ್ಥಿಗಳ ಜೀವನ ಹಾಳಾಗುತ್ತದೆ. ಮೌಲಾನ ಆಜಾದ್ ಸರ್ಕಾರಿ ಶಾಲೆ ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದ್ದನ್ನು ನಾನು ಪರಿಶೀಲನೆಗೆ ಹೋದಾಗ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಈ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.ಅಜ್ಜಂಪುರ ಕೃಷ್ಣಮೂರ್ತಿ ಅಜ್ಜಂಪುರ ಪಪಂ ಅಧ್ಯಕ್ಷ ರೇವಣ್ಣ, ಪುರಸಭೆ ಮಾಜಿ ನಾಮಿನಿ ಸದಸ್ಯೆ ಅರುಂಧತಿ ಹೆಗಡೆ ಮತ್ತಿತರ ಮುಖಂಡರು ಮಾತನಾಡಿದರು. ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.--

4ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಸಭೆಯಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್ಅ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮತ್ತಿತರರು ಭಾಗವಹಿಸಿದ್ದರು.