ಸಾರಾಂಶ
ಸಿ.ಟಿ. ರವಿ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ರಾಜ್ಯ ಸರ್ಕಾರ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಈ ನಡೆಯಿಂದ ಮುಂದಿನ ಯುವ ಪೀಳಿಗೆ ರಾಜಕೀಯ ಪ್ರವೇಶಕ್ಕೆ ಮುಜುಗರ ಅನುಭವಿಸುವಂತಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಾವೂ ಕಾನೂನು ಗೌರವಿಸುತ್ತೇವೆ. ಆದರೆ, ರಾಜ್ಯ ಸರ್ಕಾರ ಅಧಿಕಾರದ ಪ್ರಭಾವ ಬಳಸಿ ಕಾನೂನುಗಳನ್ನು ಗಾಳಿಗೆ ತೂರಿ ಸಚಿವರಾಗಿ, ಶಾಸಕರಾಗಿ ಕೆಲಸ ನಿರ್ವಹಿಸಿದ ಸಿ.ಟಿ.ರವಿಯವರನ್ನು ಅತ್ಯಂತ ಅಗೌರವದಿಂದ ಕಂಡಿದೆ. ಸಿ.ಟಿ.ರವಿ ಅಪ್ಪಟ ಹಿಂದುತ್ವವಾದಿ ಎಂಬುದೇ ಕಾಂಗ್ರೆಸ್ ನಾಯಕರ ಈ ರಾಜಕೀಯ ದ್ವೇಷಕ್ಕೆ ಮುಖ್ಯ ಕಾರಣ ಎಂದರು.ಬೆಳಗಾವಿ ಸುವರ್ಣ ಸೌಧಕ್ಕೆ ಒಂದೇ ಬಾಗಿಲು ಇರುವುದು. ಆದರೆ, ಅಷ್ಟು ಬೇಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಭಿಮಾನಿಗಳು ಹಿಂಬಾಲಕರು ಹೇಗೆ ಜಮಾವಣೆಗೊಂಡರು ಎಂದು ಪ್ರಶ್ನಿಸಿದ ಅವರು, ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವಾದರೇ, ರಾಜ್ಯದ ಜನತೆ ಪಾಡೇನು ? ಪ್ರಕರಣವನ್ನು ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ರಾಜ್ಯ ಸರ್ಕಾರ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡಿದೆ ಎಂದರು.ಸಿ.ಟಿ. ರವಿಯವರನ್ನು ಅತ್ಯಂತ ಕೀಳಾಗಿ ನಡೆಸಿಕೊಂಡಿರುವ ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಹೋರಾಟ ನಡೆಸಿದ್ದು, 250ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಸಚಿನ್ ಎಂಬ ಕಾರ್ಯಕರ್ತರ ಮೇಲೆ ಹಲ್ಲೆಯನ್ನೂ ಮಾಡಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಇಂತಹ ಪ್ರಕರಣಗಳಿಗೆ ನಾವು ಹೆದರಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರು ಕಳಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಮಾತನಾಡಿ, ಇಡೀ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಕೈಗೊಂಬೆ ಯಂತೆ ಕೆಲಸ ಮಾಡಿದೆ. ಚಿಕ್ಕಮಗಳೂರು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೋಟೆ ರಂಗನಾಥ, ಹಿರೇಮಗಳೂರು ಪುಟ್ಟಸ್ವಾಮಿ, ಪ್ರೇಮ್‌ಕುಮಾರ್, ಕುರುವಂಗಿ ವೆಂಕಟೇಶ್, ಪುಷ್ಪರಾಜ್, ಕೋಟೆ ದಿನೇಶ್ ಉಪಸ್ಥಿತರಿದ್ದರು.ಸಿ.ಟಿ. ರವಿ ಸದಸ್ಯತ್ವ ರದ್ದತಿಗೆ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹ
ಚಿಕ್ಕಮಗಳೂರು: ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆಯಿಂದ ಸಮುದಾಯದ ಜನರ ಭಾವನೆಗಳಿಗೆ ಭಾರೀ ನೋವುಂಟಾಗಿದೆ. ಸಮುದಾಯದ ನಾಯಕಿ ಬಗ್ಗೆ ಆಡಿದ ಮಾತಿಗೆ ತಕ್ಕ ಸಾಕ್ಷಿಯಾಗಲೇಬೇಕು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಸದಸ್ಯತ್ವವನ್ನು ಕೂಡಲೇ ರದ್ದು ಮಾಡಬೇಕು. ಬಿಜೆಪಿ ಹೈಕಮಾಂಡ್ ಸಿ.ಟಿ.ರವಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ತಾಲೂಕು ವೀರಶೈವ ಮಹಾಸಭಾ ಉಪಾಧ್ಯಕ್ಷ ಎಚ್.ಎಂ. ರೇಣುಕಾರಾಧ್ಯ ಆಗ್ರಹಿಸಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಸನ ಸಭೆಗಳ ಗೌರವಕ್ಕೆ ಕೆಲ ಶಾಸಕರಿಂದಾಗಿ ಧಕ್ಕೆ ಬರುತ್ತಿದೆ. ಜನರ ಸಮಸ್ಯೆಗಳು, ರಾಜ್ಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಸದನಗಳಲ್ಲಿ ಕೀಳುಮಟ್ಟದ ರಾಜಕೀಯ ನಡೆಗಳು ನಡೆಯುತ್ತಿರುವುದು ಜನರಲ್ಲಿ ರಾಜಕಾರಣಗಳ ಬಗ್ಗೆ ಅಸಹ್ಯ ಭಾವನೆ ಮೂಡಲು ಕಾರಣವಾಗುತ್ತಿದೆ. ಬೆಳಗಾವಿ ಸುವರ್ಣಸೌಧದಲ್ಲಿ ಸಿ.ಟಿ.ರವಿ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅವಮಾನ ಮಾಡಿದ್ದಾರೆ. ಈ ಮೂಲಕ ಅವರು ಚಿಕ್ಕಮಗಳೂರು ಜಿಲ್ಲೆ ಹಾಗೂ ಕ್ಷೇತ್ರದ ಮತದಾರರ ಗೌರವಕ್ಕೂ ಮಸಿ ಬಳಿದಿದ್ದಾರೆ ಎಂದು ದೂರಿದರು.ಸಿ.ಟಿ.ರವಿ ನೀಡಿದ್ದ ಈ ಹೇಳಿಕೆಯಿಂದ ಜೈಲು ಪಾಲಾಗಿದ್ದರು. ನ್ಯಾಯಾಲಯ ಸದ್ಯ ಅವರಿಗೆ ಜಾಮೀನು ನೀಡಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರಬುದ್ಧತೆ ಮರೆತು, ಸಿ.ಟಿ.ರವಿ ಮಹಾನ್ ಸಾಧನೆ ಮಾಡಿ ಬಂದಿರುವಂತೆ ಸಂಭ್ರಮಾಚರಣೆ ಮಾಡಿರುವುದು ನಾಚಿಗೇಡಿನ ಸಂಗತಿ. ಸಿ.ಟಿ.ರವಿಗೆ ವಿಪ ಸದಸ್ಯನಾಗಿರಲು ಯಾವ ಅರ್ಹತೆಯೂ ಇಲ್ಲ. ಈಗಾಗಲೇ ಅವರ ನಡವಳಿಕೆಗೆ ಬೇಸತ್ತ ಜನ ಅವರಿಂದ ಅಧಿಕಾರ ಕಿತ್ತುಕೊಂಡಿದ್ದಾರೆ. ಇಂತಹ ನಡವಳಿಕೆ ಮತ್ತೆ ಮುಂದುವರಿಸಿದರೇ ಸಿ.ಟಿ.ರವಿ ಹಾಗೂ ಬಿಜೆಪಿಗೆ ನಾಡಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ವೀರಶೈವ ಮಹಾಸಭಾದ ಮುಖಂಡರಾದ ರವೀಶ್ ಕ್ಯಾತನಬೀಡು, ಪ್ರಸಾದ್ ಸಿರಿಮನೆ, ನಟರಾಜ್ ಉಪಸ್ಥಿತರಿದ್ದರು.
21 ಕೆಸಿಕೆಎಂ 6ಪೋಟೋ ಫೈಲ್ ನೇಮ್ 21 ಕೆಸಿಕೆಎಂ 5