ಸಾರಾಂಶ
ಮುಂಡಗೋಡ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಸುಧಾ ಬೋವಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಮುಂಡಗೋಡ: ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಟ್ಟಣ ಪಂಚಾಯಿತಿಯ ದಿನಗೂಲಿ ನೌಕರನನ್ನು ಕೆಲಸದಿಂದ ತೆಗೆದುಹಾಕುವಂತೆ ಒತ್ತಾಯಿಸಿ ೨ ತಿಂಗಳು ಗತಿಸುತ್ತ ಬಂದರೂ ಏಕೆ ಕ್ರಮ ಕೈಗೊಂಡಿಲ್ಲ? ಹಾಗಾದರೆ ಸದಸ್ಯರ ಮಾತಿಗೆ ಬೆಲೆ ಇಲ್ಲವೇ ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಸುಧಾ ಬೋವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ ಕೆಲವು ಸದಸ್ಯರು, ದಿನಗೂಲಿ ನೌಕರರೊಬ್ಬರು ಪಪಂ ಕಾರ್ಯಾಲಯದ ಆಂತರಿಕ ಮಾಹಿತಿ ಕಲೆ ಹಾಕಿ ಪಟ್ಟಣ ಪಂಚಾಯಿತಿಯ ಬಹುತೇಕ ಕಾಮಗಾರಿಯನ್ನು ತನಗೆ ಬೇಕಾದವರಿಗೆ ಸಿಗುವಂತೆ ಮಾಡುತ್ತಿದ್ದಾನೆ. ಆತನನ್ನು ತೆಗೆದು ಬೇರೆಯವರನ್ನು ನೇಮಿಸಿಕೊಳ್ಳುವಂತೆ ಹಿಂದಿನ ಸಭೆಯಲ್ಲಿ ಠರಾವು ಹೊರಡಿಸಲು ತೀರ್ಮಾನಿಸಲಾಗಿತ್ತು.ಈವರೆಗೂ ಏಕೆ ತೆಗೆದು ಹಾಕಿಲ್ಲ ಎಂದು ಪ್ರಶ್ನಿಸಿದ ಸದಸ್ಯರು, ಆತನನ್ನು ಕೆಲಸದಿಂದ ತೆಗೆದುಹಾಕಿದರೆ ಪಟ್ಟಣ ಪಂಚಾಯಿತಿ ನಡೆಯುವುದಿಲ್ಲವೇ ಎಂದು ಗುಡುಗಿದರಲ್ಲದೇ, ಬೇಕಾದಷ್ಟು ಜನ ಪ್ರತಿಭಾವಂತ ನಿರುದ್ಯೋಗಿಗಳಿದ್ದಾರೆ. ತಕ್ಷಣ ಬೇರೆಯವರನ್ನು ನೇಮಿಸಿಕೊಳ್ಳಿ ಎಂದು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಚಂದ್ರಶೇಖರ, ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದ್ದು, ಅನುಭವ ಉಳ್ಳವರು ಅರ್ಜಿ ಸಲ್ಲಿಸಿದರೆ ನೇಮಕ ಮಾಡಿಕೊಳ್ಳಲಾಗುವುದು. ಮಾರ್ಚ್ ಅಂತ್ಯದ ಕೆಲಸ ಕಾರ್ಯಗಳು ಬಾಕಿ ಉಳಿದಿರುವುದರಿಂದ ವಿಳಂಬವಾಗಿದೆ. ಸ್ವಲ್ಪ ಕಾಲಾವಕಾಶ ಬೇಕು ಎಂದರು. ನಿರ್ವಹಣೆಯಲ್ಲಿ ಗೋಲ್‌ಮಾಲ್: ಪಟ್ಟಣದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಯಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ತೋರಿಸಲಾಗುತ್ತಿದ್ದು, ಇದರಲ್ಲಿ ಭಾರಿ ಗೋಲ್‌ಮಾಲ್ ನಡೆಯುತ್ತಿದೆ ಎಂದು ಪಪಂ ಸದಸ್ಯರು ಆರೋಪಿಸಿದರು. ಹಿಂದೆ ಖಾಸಗಿಯವರು ಟೆಂಡರ್ ಪಡೆದು ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಮಾಡುತ್ತಿದ್ದಾಗ ಲಕ್ಷಾಂತರ ರುಪಾಯಿ ಲಾಭವಾಗುತ್ತಿತ್ತು. ಆದರೆ ಈಗ ಪಪಂನಿಂದ ನಿರ್ವಹಿಸಲಾಗುತ್ತಿದ್ದು, ಲಾಭಕ್ಕಿಂತ ಹೆಚ್ಚು ನಷ್ಟವಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆಯಲ್ಲಿ ಪಪಂನ ವಾರ್ಷಿಕ ಬಜೆಟ್ ಮಂಡಿಸಿ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಸುಧಾ ಬೋವಿ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಸದಸ್ಯ ಫಣಿರಾಜ ಹದಳಗಿ, ಶ್ರೀಕಾಂತ ಸಾನು, ಅಶೋಕ ಚಲವಾದಿ, ಮಂಜುನಾಥ ಹರ್ಮಲಕರ, ವಿಶ್ವನಾಥ ಪವಾಡಶೆಟ್ಟರ, ಶೇಖರ ಲಮಾಣಿ, ರಜಾ ಪಠಾಣ, ಮಹ್ಮದಗೌಸ ಮಖಾಂದಾರ, ನಿರ್ಮಲಾ ಬೆಂಡ್ಲಗಟ್ಟಿ, ಕುಸುಮಾ ಹಾವಣಗಿ, ಜಾಪರ್ ಹಂಡಿ, ಬೀಬಿಜಾನ್ ಮುಲ್ಲಾನವರ, ಶಕುಂತಲಾ ನಾಯಕ, ಸುವರ್ಣ ಕೊಟಗುಣಸಿ, ನಾಗರಾಜ ಹಂಚಿನಮನಿ, ಜೈನು ಬೆಂಡಿಗೇರಿ ಮುಂತಾದವರು ಉಪಸ್ಥಿತರಿದ್ದರು.