ರಾಜಕೀಯ ಸ್ವಾರ್ಥ ಸಾಧನೆಗೆ ಧರ್ಮ ದುರ್ಬಳಕೆ ಸರಿಯಲ್ಲ: ಡಾ. ಮುಹಮ್ಮದ್

| Published : Jul 15 2024, 01:55 AM IST

ರಾಜಕೀಯ ಸ್ವಾರ್ಥ ಸಾಧನೆಗೆ ಧರ್ಮ ದುರ್ಬಳಕೆ ಸರಿಯಲ್ಲ: ಡಾ. ಮುಹಮ್ಮದ್
Share this Article
  • FB
  • TW
  • Linkdin
  • Email

ಸಾರಾಂಶ

ರ್ಮವನ್ನು ಗೌರವಿಸಬೇಕು, ಧರ್ಮವನ್ನು ಪಾಲಿಸಬೇಕು ಎಂಬ ಅಭಿಮಾನ ಬೆಳೆಸಿಕೊಳ್ಳಬೇಕಿದೆ.

ಭಟ್ಕಳ: ಧರ್ಮದ ಮೇಲೆ ನೆಲೆ ನಿಲ್ಲುವವರು ಯಾವತ್ತೂ ಹಿಂಸೆಯನ್ನು ಮಾಡುವುದಿಲ್ಲ ಮತ್ತು ಅದಕ್ಕೆ ಪ್ರಚೋದಿಸುವುದಿಲ್ಲ. ರಾಜಕೀಯ ಸ್ವಾರ್ಥ ಸಾಧನೆಗಾಗಿ ಧರ್ಮ ದುರ್ಬಳಕೆಯಾಗುತ್ತಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸದ್ಭಾವನಾ ಮಂಚ್‌ನ ರಾಷ್ಟ್ರೀಯ ಸಂಚಾಲಕ ಡಾ. ಮುಹಮ್ಮದ್ ಸಲೀಮ್ ಇಂಜಿನಿಯರ್ ತಿಳಿಸಿದರು.

ಪಟ್ಟಣದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ಸ್ಥಳೀಯ ಘಟಕದ ವತಿಯಿಂದ ಏರ್ಪಡಿಸಿದ್ದ ಸದ್ಭಾವನಾ ಸೌಹಾರ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಧರ್ಮದಿಂದಾಗಿಯೇ ಮನುಷ್ಯ ಮನುಷ್ಯರ ನಡುವೆ ದ್ವೇಷ, ಹಗೆತನ ಹುಟ್ಟಿಕೊಳ್ಳುತ್ತಿದೆ ಎಂಬ ಭ್ರಮೆಯನ್ನು ಹುಟ್ಟು ಹಾಕಲಾಗುತ್ತಿದೆ. ಆದರೆ ಇದು ಸರಿಯಲ್ಲ. ವಾಸ್ತವಿಕವಾಗಿ ಧರ್ಮದಿಂದ ಮನುಷ್ಯ ದೂರ ಆಗುತ್ತಿರುವುದೇ ಇದಕ್ಕೆಲ್ಲ ಕಾರಣವಾಗಿದ್ದು, ಧರ್ಮವನ್ನು ಗೌರವಿಸಬೇಕು, ಧರ್ಮವನ್ನು ಪಾಲಿಸಬೇಕು ಎಂಬ ಅಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದರು.

ಸದ್ಭಾವನಾ ಮಂಚ್‌ನ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿ ಸದ್ಭಾವನಾ ಸಂದೇಶ ನೀಡಿದ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಸದ್ಭಾವನಾ ಮಂಚ್ ಎನ್ನುವುದು ದೇಶದ ಉದ್ದಗಲಕ್ಕೂ ಸೌಹಾರ್ದ, ಸಾಮಾರಸ್ಯವನ್ನು ಬಲಪಡಿಸುವುದಕ್ಕಾಗಿ ಮತ್ತು ಒಂದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಕಾರ್ಯಾಚರಿಸುತ್ತಿರುವಂತಹ ವೇದಿಕೆಯಾಗಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾವಿ, ಸದ್ಭಾವನಾ ಮಂಚ್ ಭಟ್ಕಳದ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಮಾತನಾಡಿದರು. ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್, ಉಪಸಂಚಾಲಕ ಅಮೀನ್ ಆಹ್ಸನ್, ಉ.ಕ. ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಸಿರ್ಸಿ ಉಪಸ್ಥಿತರಿದ್ದರು. ಜಮಾತೆ ಇಸ್ಲಾಮಿ ಭಟ್ಕಳ ಶಾಖೆಯ ಕಾರ್ಯದರ್ಶಿ ಅಬ್ದುಲ್ ರವೂಫ್ ಸವಣೂರು ಸ್ವಾಗತಿಸಿದರು. ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್. ಮಾನ್ವಿ ನಿರೂಪಿಸಿದರು. ಗೌರವದಿಂದ ಕಾಣಿ

ಒಬ್ಬರು ಇನ್ನೊಬ್ಬರನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ನಮಗೆ ಗೌರವ, ಸನ್ಮಾನ, ಸುರಕ್ಷೆ ದೊರೆಯಬೇಕು ಎಂದು ಬಯಸುವುದಾದರೆ ಬೇರೆಯವರನ್ನೂ ಗೌರವದಿಂದ ಕಾಣಬೇಕು. ದೇಶದಲ್ಲಿ ವೈವಿಧ್ಯತೆ ಇದೆ. ಇಲ್ಲಿನ ಅಹಾರ ಪದ್ಧತಿ, ಉಡುಗೆ ತೊಡುಗೆ, ಭಾಷೆ, ಸಂಸ್ಕೃತಿ, ಧರ್ಮ, ಆಚಾರ- ವಿಚಾರ ಎಲ್ಲವೂ ವಿಭಿನ್ನವಾಗಿವೆ. ಈ ವೈವಿಧ್ಯತೆ ದೌರ್ಬಲ್ಯವಾಗದೆ ಅದು ನಮ್ಮ ಶಕ್ತಿಯಾಗಿದೆ ಎಂದು ಸದ್ಭಾವನಾ ಮಂಚ್‌ನ ರಾಷ್ಟ್ರೀಯ ಸಂಚಾಲಕ ಡಾ. ಮುಹಮ್ಮದ್ ಸಲೀಮ್ ತಿಳಿಸಿದರು.