ಕೊಡಗು ವಿವಿ ಉಳಿಸಲು ಎಬಿವಿಪಿ ಬಿಜೆಪಿ ಬೃಹತ್‌ ಕಾಲ್ನಡಿಗೆ ಜಾಥಾ

| Published : Mar 01 2025, 01:01 AM IST

ಕೊಡಗು ವಿವಿ ಉಳಿಸಲು ಎಬಿವಿಪಿ ಬಿಜೆಪಿ ಬೃಹತ್‌ ಕಾಲ್ನಡಿಗೆ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ವಿಶ್ವವಿದ್ಯಾಲಯ ಅಸ್ತಿತ್ವ ಉಳಿಸಿ ಅಭಿವೃದ್ಧಿಗೊಳಿಸುವ ಸಂಬಂಧ ರಾಜ್ಯ ಸರ್ಕಾರದ ಗಮನ ಸೆಳೆಯಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬಿಜೆಪಿ ಬೆಂಬಲದೊಂದಿಗೆ ಕುಶಾಲನಗರ ವ್ಯಾಪ್ತಿಯಲ್ಲಿ ನಡೆದ ಕಾಲ್ನಡಿಗೆ ಜಾಥಾ ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರಕೊಡಗು ವಿಶ್ವವಿದ್ಯಾಲಯ ಅಸ್ತಿತ್ವ ಉಳಿಸಿ ಅಭಿವೃದ್ಧಿಗೊಳಿಸುವ ಸಂಬಂಧ ರಾಜ್ಯ ಸರ್ಕಾರದ ಗಮನ ಸೆಳೆಯಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬಿಜೆಪಿ ಬೆಂಬಲದೊಂದಿಗೆ ಕುಶಾಲನಗರ ವ್ಯಾಪ್ತಿಯಲ್ಲಿ ನಡೆದ ಕಾಲ್ನಡಿಗೆ ಜಾಥಾ ಯಶಸ್ವಿಯಾಗಿ ನಡೆಯಿತು.ಬೆಳಗ್ಗೆ 11 ಗಂಟೆಗೆ ಚಿಕ್ಕ ಅಳುವಾರದ ವಿಶ್ವವಿದ್ಯಾಲಯ ಆವರಣದ ಹೊರಭಾಗದಿಂದ ಹೊರಟ ಜಾಥಾಕ್ಕೆ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಚಾಲನೆ ನೀಡಿದರು.ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ಬಿಜೆಪಿ ಪ್ರಮುಖರು, ಕಾರ್ಯಕರ್ತರು, ಎಬಿವಿಪಿ ಕಾರ್ಯಕರ್ತರು, ಹೆಬ್ಬಾಲೆ-ಕೂಡಿಗೆ ಮಾರ್ಗವಾಗಿ ಸುಮಾರು 17 ಕಿ.ಮೀ. ದೂರ ಕ್ರಮಿಸಿ ಕುಶಾಲನಗರಕ್ಕೆ ಮಧ್ಯಾಹ್ನ 3.30ಕ್ಕೆ ತಲುಪಿದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಕೊಡಗು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸೇರಿದಂತೆ, ಕುಶಾಲನಗರ ವ್ಯಾಪ್ತಿಯ ವಿವಿಧ ಕಾಲೇಜು ವಿದ್ಯಾರ್ಥಿಗಳು ಕೂಡ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್, ಹೆಬ್ಬಾಲೆ ಬಳಿ ಕಾಲ್ನಡಿಗೆ ಜಾಥಾ ಸೇರಿಕೊಂಡು ಸುಮಾರು 10 ಕಿ.ಮೀ. ದೂರದ ತನಕ ಹೆಜ್ಜೆ ಹಾಕಿದರು.

ಬಿಸಿಲಿನ ನಡುವೆ ಜಾಥಾ ಮಾರ್ಗದ ಉದ್ದಕ್ಕೂ ಆಯೋಜಕರು ವಿದ್ಯಾರ್ಥಿಗಳಿಗೆ ಮತ್ತು ಪಾಲ್ಗೊಂಡ ಎಲ್ಲ ಕಾರ್ಯಕರ್ತರಿಗೆ ತಂಪು ಪಾನೀಯ, ಮಜ್ಜಿಗೆ, ನೀರಿನ ಬಾಟಲ್, ಉಪಹಾರ ವ್ಯವಸ್ಥೆ ಕಲ್ಪಿಸಿದ್ದರು. ಬಿಸಿಲಿನ ಬೇಗೆ ತಾಳಲಾರದೆ ಕೆಲವು ವಿದ್ಯಾರ್ಥಿಗಳಿಗೆ ಜೊತೆಗೆ ಇದ್ದ ವಾಹನಗಳಲ್ಲಿ ಓಡಾಡಲು ಅವಕಾಶ ಕೂಡ ಕಲ್ಪಿಸಲಾಯಿತು.

ಜಾಥಾ ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಬಳಿ ಸಮಾರೋಪಗೊಂಡು ಮಾನವ ಸರಪಳಿ ರಚಿಸಿ ವಿಶ್ವವಿದ್ಯಾಲಯ ಉಳಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.

ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಯಾವುದೇ ಸಂದರ್ಭ ಕೊಡಗು ವಿವಿ ರದ್ದುಗೊಳ್ಳಬಾರದು, ಇತರ ವಿವಿಗೆ ವಿಲೀನಗೊಳಿಸಬಾರದು ಎಂದು ಒತ್ತಾಯಿಸಿದರು.ಈ ಸಂದರ್ಭ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಯಾವುದೇ ಕಾರಣಕ್ಕೂ ಕೊಡಗು ವಿವಿ ರದ್ದುಗೊಳ್ಳಬಾರದು. ಇತರ ವಿವಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ವಿರೋಧ ಇದೆ. ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಸರ್ಕಾರ ಬಡ ಮಾಧ್ಯಮ ವರ್ಗದ ವಿದ್ಯಾರ್ಥಿಗಳ ಮೇಲೆ ಕನಿಷ್ಟ ಕಾಳಜಿ ಹೊಂದಬೇಕು. ತಮ್ಮ ಸರ್ಕಾರ ಕೊಡಗು ಜಿಲ್ಲೆಯಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಗೊಳಿಸಿ ಜಿಲ್ಲೆಯ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವುದರ ಬದಲು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಿರುವುದು ವಿಷಾದನೀಯ ಎಂದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಪ್ರಮುಖರಾದ ಮಂದಾರ, ಜಿಲ್ಲಾ ಪ್ರಮುಖರಾದ ಅಂಬಿಕಾ, ಕಾರ್ಯಕಾರಿಣಿ ಸದಸ್ಯರಾದ ಗಂಧರ್ವ ಮತ್ತಿತರರು ಮಾತನಾಡಿ, ಸರ್ಕಾರ ಕೊಡಗು ವಿವಿಯನ್ನು ರದ್ದುಗೊಳಿಸಬಾರದು. ಅದನ್ನು ಉಳಿಸಿ ಅದರ ಅಭಿವೃದ್ಧಿ ಮಾಡುತ್ತ ಕ್ರಿಯಾಯೋಜನೆ ರೂಪಿಸಬೇಕು. ಹೆಚ್ಚಿನ ಅನುದಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭ ಎಬಿವಿಪಿ ಪ್ರಮುಖರಾದ ಅಮೃತಾಂಬ, ಕೌಶಲ್ಯ, ಪವನ್, ಚಂದ್ರಶೇಖರ್, ಪ್ರಮೋದ್, ರೋಹಿತ್, ಗಿರೀಶ್, ಬಿಜೆಪಿ ಪ್ರಮುಖರಾದ ಗೌತಮ್ ಗೌಡ, ಅಜೀಶ್, ಬಿ.ಬಿ. ಭಾರತೀಶ್, ಮಹಿಳಾ ಮೋರ್ಚಾ ಅಧ್ಯಕ್ಷ ಕವಿತಾ ವಿರೂಪಾಕ್ಷ, ಹೇರೂರು ಚಂದ್ರಶೇಖರ್, ಅನಂತಕುಮಾರ್ ಸೋಮೇಶ್, ಎಂ.ಎಂ. ಚರಣ್ ಜಯವರ್ಧನ್, ರಾಮು ಪ್ರವೀಣ್, ವೈಶಾಖ್ ಮತ್ತಿತರರು ಇದ್ದರು.

ಜಾಥಾದಲ್ಲಿ ಕೊಡಗು ವಿವಿ ವಿದ್ಯಾರ್ಥಿಗಳು ಸೇರಿದಂತೆ ಕುಶಾಲನಗರ ಎಂಜಿಎಂ ಪದವಿ ಕಾಲೇಜು, ಅನುಗ್ರಹ ಪದವಿ ಕಾಲೇಜು ಕನ್ನಡ ಭಾರತಿ ಪದವಿ ಕಾಲೇಜು ಸೇರಿದಂತೆ ಹಲವು ಕಾಲೇಜು ವಿದ್ಯಾರ್ಥಿಗಳು, ಎಬಿವಿಪಿ ಕಾರ್ಯಕರ್ತರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.