ಉಪನ್ಯಾಸಕರನ್ನು ನೇಮಿಸುವಂತೆ ಎಬಿವಿಪಿ ಪ್ರತಿಭಟನೆ

| Published : Sep 06 2025, 01:00 AM IST

ಉಪನ್ಯಾಸಕರನ್ನು ನೇಮಿಸುವಂತೆ ಎಬಿವಿಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆಯುತ್ತಿದ್ದರು ಸರ್ಕಾರ ಉಪನ್ಯಾಸಕರ ನೇಮಕ ಮಾಡದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಇಲ್ಲಿನ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್‌ಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರವಾರ್ತೆ ತಿಪಟೂರು

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆಯುತ್ತಿದ್ದರು ಸರ್ಕಾರ ಉಪನ್ಯಾಸಕರ ನೇಮಕ ಮಾಡದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಇಲ್ಲಿನ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್‌ಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಎಬಿವಿಪಿ ಮುಖಂಡ ಸಿದ್ದರಾಮಯ್ಯ ಮಾತನಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು ಅತಿಹೆಚ್ಚು ವಿದ್ಯಾರ್ಥಿಗಳನ್ನ ಹೊಂದಿದೆ. ಆದರೆ ಈ ಕಾಲೇಜಿನಲ್ಲಿ ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪರದಾಡುವಂತಾಗಿದೆ. ಕಾಲೇಜು ಹಳೆಕಟ್ಟಡ ಹಾಗೂ ಹೊಸ ಕಟ್ಟಡಗಳ ಮಧ್ಯೆ ಬಿ.ಎಚ್.ರಸ್ತೆ ಮೂಲಕ ಹಾದುಹೋಗಿರುವ ಕಾರಣ ವಿದ್ಯಾರ್ಥಿಗಳು ರಸ್ತೆ ದಾಟಿ ತರಗತಿಗಳಿಗೆ ಹೋಗಬೇಕಿರುವುದರಿಂದ ರಸ್ತೆದಾಟುವಾಗ ಅಪಘಾತಗಳುಂಟಾಗುತ್ತಿದ್ದು ಸರ್ಕಾರ ಕೂಡಲೇ ಸ್ಕೈವಾಕ್ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು. ಎಬಿವಿಪಿ ಮುಖಂಡ ಭರತ್ ಮಾತನಾಡಿ, ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಕನಸು ಹೊತ್ತು ಈ ಕಾಲೇಜಿಗೆ ಬರುತ್ತಿದ್ದಾರೆ. ರೈತರು, ಬಡವರು ಸೇರಿದಂತೆ ಎಲ್ಲಾ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡುವ ಕಾಲೇಜಿಗೆ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಕನಸು ನುಚ್ಚುನೂರಾಗುತ್ತಿದ್ದು ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಈ ಕಾಲೇಜಿನಲ್ಲಿ ಸುಮಾರು 3500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಆದರೆ ಸರ್ಕಾರದ ನಿಯಮದಂತೆ ಕನಿಷ್ಠ 150 ಜನ ಉಪನ್ಯಾಸಕರಾದರೂ ಬೇಕು. ಕೇವಲ 35ಜನ ಖಾಯಂ ಉಪನ್ಯಾಸಕರ ಹೊರತುಪಡಿಸಿ ಅತಿಥಿ ಉಪನ್ಯಾಸಕರನ್ನ ಕೈ ಬಿಟ್ಟಿರುವ ಕಾರಣ ಪಾಠ ಪ್ರವಚನಗಳಿಗೆ ಹಿನ್ನಡೆಯಾಗಿದೆ. ವಿಷಯಗಳನ್ನು ಮುಗಿಸಲು ಆಗದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಶಿಕ್ಷಕರು ಹಾಗೂ ಇತರೇ ಸಿಬ್ಬಂದಿ ನೇಮಕ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಬಿವಿಪಿಯಿಂದ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಮೋಹನ್, ರಾಜೇಶ್, ವಿನಯ್, ರಮ್ಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.