ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನೀಟ್ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ನಡೆದಿರುವ ಅಕ್ರಮವನ್ನು ಸಿಬಿಐ ತನಿಖೆಗೆ ಒಳಪಡಿಸವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಭೆ ನಡೆಸಿದರು. ನೀಟ್ ಪರೀಕ್ಷೆ ನಡೆಸುವಲ್ಲಿ ಮತ್ತು ಮೌಲ್ಯಮಾಪನದಲ್ಲಿ ಎನ್‌ಟಿಎ ಅಸಮರ್ಥತೆ ಮತ್ತು ಭ್ರಷ್ಚಾಚಾರ ಬಹಿರಂಗಗೊಂಡಿದೆ. ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳಲ್ಲಿ ಆಕ್ರೋಶ ಮೂಡಿದ್ದು ಪರೀಕ್ಷಾ ವ್ಯವಸ್ಥೆ ಮೇಲೆ ನಂಬಿಕೆ ಮೂಡಿಸುವ ಕೆಲಸಗಳು ಆಗಬೇಕಿದೆ. ಹಾಗಾಗಿ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಲೋಕಸಭೆ ಚುನಾವಣೆ ಫಲಿತಾಂಶದ ದಿನ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಔಚಿತ್ಯವಾದರೂ ಏನಿತ್ತು. ಏನನ್ನು ಮರೆಮಾಚುವ ಉದ್ದೇಶ ಹೊಂದಲಾಗಿದೆ ಎಂದು ಎಬಿವಿಪಿ ಆತಂಕ ವ್ಯಕ್ತಪಡಿಸಿದೆ. ನೀಟ್ ಪರೀಕ್ಷೆ ದಿನವೇ ದೇಶದ ಕೆಲವು ಭಾಗಗಳಲ್ಲಿ, ವಿವಿಧ ಸ್ಥಳಗಳಲ್ಲಿ ಮೇಲ್ವಿಚಾರಕರು ಸಿಕ್ಕಿಬಿದ್ದಿದ್ದಾರೆ ಮತ್ತು ಕೆಲವು ಸ್ಥಳಗಳಲ್ಲಿ ಪ್ರಶ್ನೆ ಪತ್ರಿಕೆಗಳ ವಿತರಣೆಯಲ್ಲೂ ಅಕ್ರಮಗಳು ನಡೆದಿವೆ. ಎಬಿವಿಪಿ ನೀಟ್ ಪರೀಕ್ಷೆ ಅಭ್ಯರ್ಥಿಗಳ ಸಮರ್ಥನೀಯ ಬೇಡಿಕೆಗಳೊಂದಿಗೆ ನಿಂತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ವೈದ್ಯಕೀಯ ಸಂಸ್ಥೆಗಳ ಪ್ರವೇಶಕ್ಕೆ ನಡೆಸುವ ಈ ಪರೀಕ್ಷೆ ಪಾರದರ್ಶಕತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ತೀವ್ರ ಅಪನಂಬಿಕೆ ಇದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಪರೀಕ್ಷೆ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ. ಪರೀಕ್ಷೆ ಫಲಿತಾಂಶಗಳ ಬಗ್ಗೆ ನೀಟ್ ಆಕಾಂಕ್ಷಿಗಳಲ್ಲಿ ಅಪನಂಬಿಕೆ ಹೆಚ್ಚುತ್ತಿದೆ. ಇದನ್ನು ಪರಿಹರಿಸಲು ಈ ಸಂಪೂರ್ಣ ವಿಷಯ ತನಿಖೆ ಮಾಡಲು ಸಿಬಿಐ ತನಿಖೆ ನಡೆಸಬೇಕಾಗಿದೆ. ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕಿದೆ.
ಈ ವರ್ಷದ ನೀಟ್ ಪರೀಕ್ಷೆ ಅನೇಕ ಟಾಪರ್‌ಗಳು ಒಂದೇ ಕೇಂದ್ರದಿಂದ ಬಂದಿದ್ದು, ಇದು ಪರೀಕ್ಷಾ ಫಲಿತಾಂಶದ ಮೇಲೆ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ. ಯುಜಿಸಿ ನಡವಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಲ್ಲಿ ಸಾಕಷ್ಟು ಪ್ರಶ್ನೆ ಉದ್ಭವಿಸಿವೆ. ಆಡಳಿತಶಾಹಿ ನಡವಳಿಕೆಗೆ ಇದು ತಾಜಾ ಉದಾಹರಣೆಯಾಗಿದೆ. ಪರೀಕ್ಷೆಗಳ ನಡೆಸುವ ಬಗೆಯಲ್ಲಿನ ನ್ಯೂನ್ಯತೆ ಇದಾಗಿದೆ. ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳು ನಡೆಯುತ್ತಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಪರೀಕ್ಷೆ ನಡೆಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಶ್ವಾಸದ ವಾತಾವರಣ ಮೂಡುವಂತೆ ಮಾಡಲು ಇಡೀ ಪ್ರಕರಣವ ಸಿಬಿಐ ತನಿಖೆಗೆ ವಹಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.ಎಬಿವಿಪಿ ನಗರ ಕಾರ್ಯದರ್ಶಿ ಗೋಪಿ, ಮಹಿಳಾ ವಿದ್ಯಾರ್ಥಿ ಪ್ರಮುಖ ಚೈತ್ರಾ, ಸಾಮಾಜಿಕ ಜಾಲತಾಣದ ಚಿತ್ರಸ್ವಾಮಿ, ಕಾರ್ಯಕರ್ತರಾದ ಕಾರ್ತಿಕ್, ದರ್ಶನ್, ಮಧು, ಮಣಿಕಂಠ, ದಾನೇಶ್, ಚಂದ್ರಕಲಾ, ಸಂಜನಾ, ತಿಪ್ಪೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.