ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಉಡುಪಿ ಜಿಲ್ಲೆಗೆ ಸರ್ಕಾರಿ ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಕಳ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ತಾಂತ್ರಿಕ ಕಾಲೇಜು ಮತ್ತು ವೈದ್ಯಕೀಯ ಕಾಲೇಜು ಇಲ್ಲದೇ ಇರುವುದು ಬಹಳ ಆಶ್ಚರ್ಯಕರ ಹಾಗೂ ದುಃಖದಾಯಕ ವಿಷಯವಾಗಿದೆ. ಅನೇಕ ವರ್ಷಗಳಿಂದ ಎಬಿವಿಪಿ ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸುತ್ತಾ ಬಂದಿದೆ. ಕಳೆದ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅಂದಿನ ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರು ಎಬಿವಿಪಿ ಮನವಿಗೆ ಸ್ಪಂದಿಸಿ ಪೂರಕವಾಗಿ ಸರ್ಕಾರದಿಂದ ಉಳ್ಳೂರು ಭಾಗದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲು 30 ಎಕರೆ ಜಮೀನನ್ನು ಮಂಜೂರಾತಿ ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೆ ಆ ವಿಷಯವಾಗಿ ಯಾವುದೇ ರೀತಿಯ ಬೆಳವಣಿಗೆ ಆಗದೆ ಇರುವುದು ಬಹಳ ಖಂಡನಾರ್ಹ. ಈಗಾಗಲೇ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇಂತಹ ಕಾಲೇಜು ಇದ್ದು, ಉಡುಪಿಗೂ ಮುಂದಿನ ಅಧಿವೇಶನದಲ್ಲಿ ಸೂಕ್ತ ಜಮೀನಿನ ವ್ಯವಸ್ಥೆ ಹಾಗೂ ಹಣಕಾಸಿನ ಬಿಡುಗಡೆ ಮಾಡಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸುತ್ತೇವೆ ಎಂಬ ಮನವಿಯನ್ನು ಎಬಿವಿಪಿ ಕಾರ್ಕಳ ತಹಸೀಲ್ದಾರ್ ನರಸಪ್ಪ ಅವರ ಮೂಲಕ ಸರಕಾರಕ್ಕೆ ನೀಡಲಾಯಿತು.
ಈ ಸಂದರ್ಭ ತಾಲೂಕು ಸಂಚಾಲಕ ಶ್ರೇಯಸ್ ಅಂಚನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಪವನ್ ಕುಲಾಲ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಸೌಮ್ಯ ಜಿ. ನಾಯಕ್, ತಾಲೂಕು ಸಹ ವಿದ್ಯಾರ್ಥಿನಿ ಪ್ರಮುಖ್ ಮನ್ವಿತಾ ಕುಲಾಲ್, ನಗರ ಸಹ ಕಾರ್ಯದರ್ಶಿ ದೀಕ್ಷಿತ್ ಹಾಗೂ ಪ್ರಮುಖ ಕಾರ್ಯಕರ್ತರಾದ ಮನೋಜ್, ವಿಜೇಂದ್ರ, ಯುವರಾಜ್, ಸುದೀಪ್, ತನುಶ್ರೀ, ಪ್ರಜ್ವಲ್, ಶಿವಪ್ರಸಾದ್, ಶ್ರೀಧರ್, ಮನ್ವಿತ್, ಶಿವಾನಂದ ಉಪಸ್ಥಿತರಿದ್ದರು.