ಎಫ್‌ಐಆರ್ ಖಂಡಿಸಿ ಎಬಿವಿಪಿ ಬೃಹತ್ ಪ್ರತಿಭಟನಾ ಜಾಥಾ

| Published : Apr 24 2024, 02:25 AM IST

ಸಾರಾಂಶ

ಈ ಜಾಥಾ ಆರಂಭಕ್ಕೂ ಮುನ್ನ ಜೋಡುಕಟ್ಟೆಯ ಬಳಿ ಅನುಮತಿ ಇಲ್ಲದೇ ಜಾಥಾ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಎಬಿವಿಪಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು‌. ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ವಿದ್ಯಾರ್ಥಿಗಳು ಜಾಥಾ ನಡೆಸುವಲ್ಲಿ ಯಶಸ್ವಿಯಾದರು.

ಕನ್ನಡಪ್ರಭ ವಾರ್ತೆ ಉಡುಪಿ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆಯನ್ನು ಖಂಡಿಸಿ ಜಿಲ್ಲೆಯ ಕಾರ್ಕಳದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಡೆಸಿದ ಪಂಜಿನ ಮೆರವಣಿಗೆ ವಿರುದ್ಧ ಪೊಲೀಸರು ದೂರು ದಾಖಲಿಸಿರುವುದನ್ನು ಖಂಡಿಸಿ, ಮಂಗಳವಾರ ಉಡುಪಿ ಜಿಲ್ಲಾ ಎಬಿವಿಪಿ ವತಿಯಿಂದ ಉಡುಪಿ ನಗರದ ಜೋಡುಕಟ್ಟೆಯಿಂದ ಸರ್ವೀಸ್ ಬಸ್ ನಿಲ್ದಾಣದ ವರೆಗೆ ಬೃಹತ್ ಜಾಥಾ ನಡೆಯಿತು.ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಮಾಣಿಕ್ಯ, ಹುಬ್ಬಳ್ಳಿ ಘಟನೆಯಿಂದ ಕಾಲೇಜು ಕ್ಯಾಂಪಸ್‌ಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯನ್ನು ಖಂಡಿಸಿ, ಸಂಬಂಧಪಟ್ಟವರ ಅನುಮತಿ ಪಡೆದೂ ಪಂಜಿನ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಎಫ್.ಐ.ಆರ್. ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಹರ್ಷಿತ್ ಕೊಯಿಲ, ಗಣೇಶ್ ಪೂಜಾರಿ, ಶ್ರೀವತ್ಸ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.