ನಾಡಗೀತೆ ತಿದ್ದುಪಡಿ ಸುತ್ತೋಲೆಗೆ ಎಬಿವಿಪಿ ಆಕ್ಷೇಪ

| Published : Feb 22 2024, 01:49 AM IST

ಸಾರಾಂಶ

‘ಖಾಸಗಿ ಶಾಲೆ-ಕಾಲೇಜುಗಳಲ್ಲಿ ನಾಡಗೀತೆ ಯಾಕಿಲ್ಲ? ಧೈರ್ಯವಾಗಿ ಪ್ರಶ್ನಿಸಿ’ ಎಂದು ದಾವಣಗೆರೆಯಲ್ಲಿ ಎಬಿವಿಪಿ ಕಾರ್ಯಕರ್ತರು ನಾಮಫಲಕ ಹಿಡಿದು ಸರ್ಕಾರದ ಸುತ್ತೋಲೆ ವಿರುದ್ಧ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರದ ಇತ್ತೀಚಿನ ಸುತ್ತೋಲೆಯಲ್ಲಿ ‘ಎಲ್ಲಾ ಶಾಲೆಗಳಲ್ಲಿ’ ಎನ್ನುವ ಪದವನ್ನು ಕೈ ಬಿಟ್ಟು, ‘ಕೇವಲ ಸರ್ಕಾರಿ ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ನಾಡಗೀತೆ’ ಹಾಡಬೇಕೆಂದು ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಎಬಿವಿಪಿ ಪದಾಧಿ ಕಾರಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿನ ಜಯದೇವ ವೃತ್ತದಲ್ಲಿ ಬುಧವಾರ ಕರ್ನಾಟಕ ಸರ್ಕಾರದ ನಾಡಗೀತೆ ಕುರಿತ ಅಧಿಕೃತ ತಿದ್ದುಪಡಿ ಸುತ್ತೋಲೆಗೆ ಆಕ್ಷೇಪವೆತ್ತಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಎಬಿವಿಪಿಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ ಮಾತನಾಡಿ, ಕನ್ನಡಿಗರು ಹುಟ್ಟು ಸ್ವಾಭಿಮಾನಿಗಳು ಎನ್ನುವುದನ್ನು ಜನ ಸರ್ಕಾರವು ಮರೆತಂತಿದೆ. ಈ ಕರುನಾಡಿನ ನಾಡು ನುಡಿಯ ನೆಲ ಜಲದ ಸಾಹಿತ್ಯ ಸಂಸ್ಕೃತಿಯ ಹೆಮ್ಮೆಯನ್ನು ಪ್ರತಿಯೊಬ್ಬ ಕನ್ನಡಿಗನೂ ಕುವೆಂಪುರವರ ಅರ್ಥಗರ್ಭಿತ ಪದ್ಯದ ಮುಖಾಂತರ ಹಾಡಿ ರೋಮಾಂಚನಗೊಳ್ಳುತ್ತಿದ್ದ ಈ ತಿದ್ದುಪಡಿಯ ಸುತ್ತೋಲೆಯಿಂದಾಗಿ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನ ಅಂತಃಕರಣ ಕಲುಕಿದಂತಾಗಿದೆ. ದೀಕ್ಷೆಯ ತೊಡು ಇಂದೇ ಕಂಕಣ ಕಟ್ಟಿಂದೆ. ಎನ್ನುವ ರಾಷ್ಟ್ರಕವಿ ಕುವೆಂಪುರವರ ಮಾತಿನಂತೆ ಕನ್ನಡ ನಾಡಗೀತೆಯನ್ನು ಪ್ರತಿ ಶಾಲೆಗಳಲ್ಲೂ ಪ್ರತಿ ಮಗುವಿನ ರುನ್ಮನಗಳಲ್ಲಿಯೂ ಅನುರಣಿಸುವಂತೆ, ತಾಯಿ ಭಾರತೀಯ ಹೆಮ್ಮೆಯ ತನುಜಾತೆ ಕರ್ನಾಟಕ ಮಾತೆ ಎಂದು ಸಾರಿ ಹಾಡುವಂತೆ ನಾಡಿನ ಪ್ರತಿಯೊಬ್ಬ ಪ್ರಜೆಗೂ ವಿದ್ಯಾರ್ಥಿ ಪರಿಷತ್ ಕರೆ ನೀಡುತ್ತದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಸಹ ಕಾರ್ಯದರ್ಶಿ ಮೋಹಿತ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರತನ್, ತಿಪ್ಪೇಸ್ವಾಮಿ, ಕರಿಬಸವ, ಉಮೇಶ್ ಇನ್ನಿತರರು ಉಪಸ್ಥಿತರಿದ್ದರು.