ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಡ್ರಗ್ಸ್ ಮಾಫಿಯಾ, ಮಾದಕ ವಸ್ತು ಸೇವನೆ ಹಾಗೂ ಮಾರಾಟ ನಿಯಂತ್ರಣ ಸಂಬಂಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಗರದ ಗನ್ ಹೌಸ್ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.ನಶಾ ಮುಕ್ತ ಕರ್ನಾಟಕಕ್ಕಾಗಿ ಎಬಿವಿಪಿ ಮೈಸೂರು ಚಲೋ ಜನ ಜಾಗೃತಿ ಜಾಥಾ ಹಾಗೂ ಗಾಂಧಿ ಚೌಕದಲ್ಲಿ ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಿತ್ತು. ಆದರೆ, ಪೊಲೀಸರು ಜಾಗೃತಿ ಜಾಥಾಗೆ ಅವಕಾಶ ನೀಡದ ಕಾರಣ, ಗನ್ ಹೌಸ್ ವೃತ್ತದಲ್ಲೇ ಪ್ರತಿಭಟಿಸಿ, ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಈ ರ್ಯಾಲಿಯಲ್ಲಿ ಮಂಗಳೂರು, ಪುತ್ತೂರು, ಮಡಿಕೇರಿ, ಹಾಸನ ಭಾಗದ ಕಾರ್ಯಕರ್ತರು ಆಗಮಿಸಿದ್ದರು. ಪೊಲೀಸರು ಜಾಗೃತಿ ಜಾಥಾಗೆ ಅವಕಾಶ ನೀಡದೆ ಗನ್ ಹೌಸ್ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ದರು. ಆದರೂ ಎಬಿವಿಪಿ ಕಾರ್ಯಕರ್ತರು ಜಾಥಾ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಗನ್ ಹೌಸ್ ವೃತ್ತದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದಾಗ ಮಾತಿನ ಚಕಮಕಿ ನಡೆಯಿತು. ಅಲ್ಲದೆ, ಪೊಲೀಸರ ಕ್ರಮವನ್ನು ಖಂಡಿಸಿ, ಗೃಹ ಸಚಿವರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.ಮೈಸೂರಿನಲ್ಲಿ ಇತ್ತೀಚೆಗೆ ಪತ್ತೆಯಾದ ಬೃಹತ್ ಡ್ರಗ್ಸ್ ಫ್ಯಾಕ್ಟರಿ ಪ್ರಕರಣ, ಮಾದಕ ವಸ್ತು ಸೇವನೆ ಮತ್ತು ಅವ್ಯಾಹತ ಮಾರಾಟದ ಕುರಿತು ಗಂಭೀರವಾಗಿ ಆಲೋಚಿಸಬೇಕಾದ ಸಂದರ್ಭ ಒದಗಿ ಬಂದಿದೆ. ಪ್ರಸ್ತುತ ನಗರ ಪ್ರದೇಶಗಳು ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿಯೂ ಮಾದಕ ವಸ್ತು ವ್ಯಸನಕ್ಕೆ ತುತ್ತಾಗಿರುವ ಲಕ್ಷಾಂತರ ಯುವಕರಿದ್ದಾರೆ. ಸಿಂಥೆಟಿಕ್ ಡ್ರಗ್ಸ್ ಉತ್ಪಾದನೆ, ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಡ್ರಗ್ ಮಾಫಿಯಾವನ್ನು ಬೇರುಸಹಿತ ಕಿತ್ತು ಹಾಕಲು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಮತ್ತು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈ ಕಾಯ್ದೆಗಳ ಅಡಿಯಲ್ಲಿ ಗರಿಷ್ಠ ಶಿಕ್ಷೆ ವಿಧಿಸುವುದರ ಜೊತೆಗೆ, ತನಿಖಾ ಸಂಸ್ಥೆಗಳಿಗೆ ಮತ್ತಷ್ಟು ಅಧಿಕಾರ ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು. ಡ್ರಗ್ ಪೆಡ್ಲರ್ಸ್, ತಯಾರಕರು ಮತ್ತು ಅವರ ಹಿನ್ನೆಲೆಯಲ್ಲಿರುವ ದೊಡ್ಡ ಆರೋಪಿಗಳನ್ನು ಯಾವುದೇ ಮುಲಾಜಿಲ್ಲದೆ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ಫ್ಯಾಕ್ಟರಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎನ್ ಡಿಪಿಎಸ್ ಮತ್ತು ಕೋಪ್ಪಾ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಬೇಕು. ಯುವಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಶಾಲಾ ಕಾಲೇಜು ಹಾಗೂ ವಿದ್ಯಾರ್ಥಿ ಸಂಘಟನೆಗಳ ನೆರವಿನಿಂದ ನಿರಂತರ ಅಭಿಯಾನ ನಡೆಸಬೇಕು. ಸಿವಿಲ್ ಠಾಣೆಗಳಲ್ಲಿ ದಾಖಲಾಗುವ ಡ್ರಗ್ಸ್ ಪ್ರಕರಣಗಳ ಮೇಲ್ವಿಚಾರಣೆಗೆ ಸರ್ಕಾರ ರಚಿಸಿರುವ ಎಎನ್ ಟಿಎಫ್ ತಂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಂಪೂರ್ಣ ಸ್ವತಂತ್ರ ನೀಡಬೇಕು ಎಂದು ಅವರು ಒತ್ತಾಯಿಸಿದರು.ಎಬಿವಿಪಿ ರಾಜ್ಯ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ಪದಾಧಿಕಾರಿಗಳಾದ ವಸಂತ, ಸಂಜೀತ್, ಪ್ರಜ್ವಲ್, ಗುರುಪ್ರಸಾದ್, ಮಣಿಕಂಠ ಹಾಗೂ ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು ಇದ್ದರು.
ಡ್ರಗ್ಸ್ ಪತ್ತೆಯಾದ ಅಂಗಡಿ ಮುಚ್ಚಿಸಲು ಆಗ್ರಹಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಜರ್ ಬಾದ್ ವೃತ್ತದ ಬಳಿಯ ಹೊರ ರಾಜ್ಯದ ವ್ಯಕ್ತಿ ನಡೆಸುತ್ತಿದ್ದ ಕಿರಾಣಿ ಅಂಗಡಿಯಲ್ಲಿ ಇತ್ತೀಚೆಗೆ ಮಾದಕ ವಸ್ತು ಪತ್ತೆಯಾದರೂ ಆ ಅಂಗಡಿ ಮುಚ್ಚಿಸುವ ಕೆಲಸ ಮಾಡಿಲ್ಲ ಎಂದು ಅಭಿವೃದ್ಧಿ ಯಶಸ್ವಿ ಮಿಲನ ಗ್ರೂಪ್ಸ್ ನ ದೀಪಕ್ ಪುಟ್ಟಸ್ವಾಮಿ ದೂರಿದರು. ಕಿರಾಣಿ ಅಂಗಡಿ ಮಾಲೀಕನನ್ನು ಪೊಲೀಸರು ವಶಕ್ಕೆ ಸಹ ಪಡೆದಿದ್ದರು. ಆದರೂ ಅಂಗಡಿ ಬಂದ್ ಮಾಡಿಸಿಲ್ಲ. ಈ ಪ್ರದೇಶದ ಯುವಜನರು ಮಾದಕ ವಸ್ತು ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಈ ರೀತಿಯ ಅಂಗಡಿಗಳೇ ಕಾರಣವಾಗಿವೆ. ಹೀಗಾಗಿ, ಈ ಅಂಗಡಿ ಮಾತ್ರವಲ್ಲ, ಈ ರೀತಿಯ ಇತರೆ ಅಂಗಡಿಗಳಲ್ಲೂ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಸದಸ್ಯರಾದ ಸುನಿಲ್ ನಾರಾಯಣ್, ಶ್ರೀಪಾಲ್, ಸುರೇಶ್ ರಾವ್, ನಿರಂಜನ್ ರಾವ್ ಇದ್ದರು.