ಸಾರಾಂಶ
ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಸೋಮವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಪ್ರತಿಭಟನೆ ಕೈಗೊಂಡರು.
ಸವಣೂರು: ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಸೋಮವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಪ್ರತಿಭಟನೆ ಕೈಗೊಂಡರು.
ಪ್ರತಿಭಟನೆಯಲ್ಲಿ ಎಬಿವಿಪಿ ಪದಾಧಿಕಾರಿಗಳು, ನೂರಾರು ವಿದ್ಯಾರ್ಥಿಗಳು ಒಂದು ಗಂಟೆಗೂ ಹೆಚ್ಚು ಕಾಲ ಬಸ್‌ಗಳನ್ನು ತಡೆದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ನಂತರ ಉಪ ತಹಸೀಲ್ದಾರ್ ಎಸ್.ಎಸ್. ಪಾಟೀಲ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡುವುದರ ಮೂಲಕ ಬಡ, ಕೂಲಿ ಕಾರ್ಮಿಕರು, ಮಧ್ಯಮವರ್ಗದ ಜನತೆಗೆ ಹೊರೆ ಹೇರಿದಂತಾಗಿದೆ. ಸರ್ಕಾರ ಬಸ್‌ಗಳನ್ನೇ ಅವಲಂಬಿಸಿ ಸಾವಿರಾರು ಜನ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ. ಆದರೆ, ಶೇ.15ರಷ್ಟು ಬಸ್ ಪ್ರಯಾಣದರ ಹೆಚ್ಚಳ ಮಾಡುವುದರ ಮೂಲಕ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಹಾಕುತ್ತಿದೆ.
ಬಸ್‌ಗಳ ಸಂಖ್ಯೆ ಹೆಚ್ಚಿಸಿ, ಪ್ರಯಾಣ ದರವನಲ್ಲ:ಶಕ್ತಿ ಯೋಜನೆಯಿಂದಾಗಿ ದಿನನಿತ್ಯ ಬಸ್‌ಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಇದೆ. ಆದರೆ, ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ದಿನನಿತ್ಯ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ. ವಿದ್ಯಾರ್ಥಿಗಳ ಶಾಲಾ-ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಹಲವಾರು ಬಸ್‌ಗಳಲ್ಲಿ ಸ್ಥಳಾವಕಾಶ ಇಲ್ಲದೆ ಬಸ್‌ಗಳನ್ನು ನಿಲ್ಲಿಸಿದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ, ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಸರ್ಕಾರ ಕೂಡಲೇ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರ ಪ್ರಯಾಣಕ್ಕೆ ಅನುಕೂಲ ಮಾಡಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರಕ್ಕೆ ಮನವಿ ಮೂಲಕ ಆಗ್ರಹಿಸಿದರು.ಎಬಿವಿಪಿ ಸವಣೂರ ನಗರ ಕಾರ್ಯದರ್ಶಿ ಅನೂಪಕುಮಾರ ಗಾಣಿಗೇರ, ಪ್ರಮುಖರಾದ ಕಿರಣಕುಮಾರ ವಿವೇಕವಂಶಿ, ಈರಯ್ಯ ಹಿರೇಮಠ, ವಿದ್ಯಾರ್ಥಿಗಳಾದ ಹರೀಶ ಪಾಟೀಲ, ಬಸನಗೌಡ ಕರೆಸೋಮನಗೌಡ್ರ, ಅರುಣ ಮೆಕ್ಕಿ, ಶಿವನಗೌಡ, ಪ್ರದೀಪ ಭೋವಿ, ವಿನಾಯಕ ಮಿರ್ಜಿ, ಅರುಣ ಸಂಕ್ಲಿಪೂರ, ರಾಜಶೇಖರ ರಾಗಿ, ತಾಜುದ್ದೀನ್, ವಿರಾಟ ಹಿರೇಮಠ, ಮಹೇಶ ದೇಸಾಯಿ, ಶ್ರೇಯಾ ದೊಡ್ಡಗೌಡ್ರ, ಪವಿತ್ರಾ, ನಿರ್ಮಲಾ, ವೀಣಾ ಹತ್ತಿ, ವಿನಾಯಕ ಕುಲಕರ್ಣಿ ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.