ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ

| Published : Apr 20 2024, 01:04 AM IST

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ಡಿಸಿ ಕಚೇರಿ ಮುಂದೆ ಎಬಿವಿಪಿ ಪದಾಧಿಕಾರಿಗಳು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಹುಬ್ಬಳ್ಳಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್‌ ಜಿಹಾದ್‌ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಜಿಲ್ಲಾ ಸಮಿತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಸಮಿತಿ ಮುಖಂಡರು, ಪದಾಧಿಕಾರಿಗಳು ಹತ್ಯೆ ಖಂಡಿಸಿ ಘೋಷಣೆ ಕೂಗಿದರು, ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರೀತಿ ವಿಚಾರವಾಗಿ ನೇರಾ ಹಿರೇಮಠ ಅವರನ್ನು ಪೀಡಿಸುತ್ತಿದ್ದ ಆರೋಪಿ ಫಯಾಜ್ ಆಕೆ ಅದನ್ನು ತಿರಸ್ಕರಿಸಿದ್ದಕ್ಕೆ, ಲವ್‌ ಜಿಹಾದ್‌ ಕೃತ್ಯಕ್ಕೆ ಮುಂದಾಗಿ ವಿದ್ಯಾಭ್ಯಾಸದ ದೇಗುಲದಲ್ಲಿಯೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ಸಂಗತಿಯಾಗಿದೆ. ಘಟನೆಯಿಂದಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ದೇಶದ ಕಾನೂನಿನ ಮೇಲೆ ಗೌರವ, ಭಯ-ಭೀತಿಯಿಲ್ಲದ ಆರೋಪಿ ಫಯಾಸ್‌ ಇಂತಹ ಕೃತ್ಯ ನಡೆಸಿ ಸಮುದಾಯ ಭೀತಿಗೊಳ್ಳುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಕುರಿತು ಗಂಭೀರ ಚಿಂತನೆ ಮಾಡಬೇಕಾದ ಸರ್ಕಾರ ಯಾವುದೇ ರೀತಿಯ ಕ್ರಮ ಜರುಗಿಸುತ್ತಿಲ್ಲವೆಂದು ದೂರಿದರು. ಈ ಕೂಡಲೇ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸಿ, ಹತ್ಯೆ ಘಟನೆಯನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಿ, ಅಗತ್ಯವಿದ್ದರೆ ಸಿಬಿಐಗೆ ವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ಬಿಗಿ ಭದ್ರತೆ ಕಲ್ಪಿಸಬೇಕು. ಪೊಲೀಸರು ಮಫ್ತಿಯನ್ನು ತಿರುಗಾಡಿ ಇಂತಹ ಕೃತ್ಯಗಳ ಮೇಲೆ ನಿಗಾವಹಿಸಿ, ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಪಾಂಡು ಮೊರೆ, ಮೋಹನ ಹೂಗಾರ,ರಂಗನಾಥ, ನಿಕೇತನ, ಭೀಮೇಶ, ನಿತೀನ್‌, ಸಾಗರ, ನವೀನ್‌ ಸೇರಿ ಅನೇಕರು ಇದ್ದರು.