ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ

| Published : Apr 20 2024, 01:02 AM IST

ಸಾರಾಂಶ

ಹುಬ್ಬಳ್ಳಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶುಕ್ರವಾರ ಎಬಿವಿಪಿಯಿಂದ ಪ್ರತಿಭಟನ ನಡೆಸಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು ಇಂತಹ ದೇಗುಲದಲ್ಲಿ ಹಾಡು ಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರ ಹತ್ಯೆ ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ ಎಂದು ಆರೋಪಿಸಿ ಶುಕ್ರವಾರ ಎಬಿವಿಪಿ ಪ್ರತಿಭಟನೆ ನಡೆಸಿತು.

ಹುಬ್ಬಳ್ಳಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಜಿಹಾದಿ ಕ್ರೂರ ಮನಸ್ಥಿತಿಯ ಪಯಾಜ್ ಎಂಬಾತ ಲವ್ ಜಿಹಾದಿಗಾಗಿ ಅವಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಪ್ರೀತಿಯನ್ನು ವಿದ್ಯಾರ್ಥಿನಿ ನಿರಾಕರಿಸಿದಕ್ಕಾಗಿ ಆಕೆ ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿ ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಲೇಜಿನ ಒಳಗೆ ಬಂದು ವಿದ್ಯಾರ್ಥಿನಿ ಹತ್ಯೆ ಮಾಡಲು ಸಾಧ್ಯವಾಗಿರಬೇಕಾದರೆ, ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದೆ ರಾಜಾರೋಷವಾಗಿ ಕೃತ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ, ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಕುಸಿದು ಹೋಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುವಂತಾಗಿದೆ ಎಂದರು.

ಈ ಘಟನೆಯಿಂದ ರಾಜ್ಯದ ವಿದ್ಯಾರ್ಥಿ ಸಮುದಾಯ ಭಯಭೀತಗೊಂಡಿದೆ. ಪೊಲೀಸರು ಕೂಡಲೇ ಸೂಕ್ತ ತನಿಖೆ ಕೈಗೊಂಡು, ಅಪರಾಧಿಗೆ ಉಗ್ರ ಶಿಕ್ಷೆ ಆಗುವ ಹಾಗೆ ಮಾಡಿ ವಿದ್ಯಾರ್ಥಿನಿ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ. ಜತೆಗೆ ರಾಜ್ಯಾದ್ಯಂತ ಪೊಲೀಸರು ಶಾಲಾ ಕಾಲೇಜುಗಳ ಬಳಿ ಮಪ್ತಿಯಲ್ಲಿ ಕಾರ್ಯನಿರ್ವಹಿಸಿ ಸಂಭಾವ್ಯ ಘಟನೆ ತಡೆಯಲು ಪ್ರಯತ್ನಿಸಬೇಕು.

ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರಗಳು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಕಾನೂನಿನ ಭಯ ಇಲ್ಲದಾಗ ಮಾತ್ರ ಇಂತಹ ಘಟನೆ ನಡೆಯಲು ಸಾಧ್ಯ, ಕಾಲೇಜು ಕ್ಯಾಂಪಸ್‌ಗಳು ಸುರಕ್ಷತೆ ಕೇಂದ್ರಗಳಾಗಬೇಕು.

ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನಹರಿಸಬೇಕು ಹಾಗೂ ಉನ್ನತ ಮಟ್ಟದ ತನಿಖೆ ಮಾಡಬೇಕು. ಅಗತ್ಯ ಎಂದು ಕಂಡರೆ ಪ್ರಕರಣದ ತನಿಖೆ ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೀದರ್ ಘಟಕ ಮನವಿ ಮಾಡಿದೆ.

ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಮೂಲಕ ಆಗ್ರಹಿಸಲಾಯಿತು. ಈ ವೇಳೆ ನಾಗರಾಜ್ ಕಾಲೇಜ್ ಕಾರ್ಯದರ್ಶಿ ಸಾಯಿ ಕಿರಣ್, ಅಭಿಷೇಕ್ ಶಂಭು, ವಿಶ್ವೇಶ್ವರ, ರಾಜಕುಮಾರ, ಶ್ವೇತಾ, ಸ್ವಾತಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.