ಎನ್‌ಇಪಿ ರದ್ದತಿ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಎಬಿವಿಪಿ ಪ್ರತಿಭಟನೆ

| Published : May 16 2024, 12:47 AM IST

ಎನ್‌ಇಪಿ ರದ್ದತಿ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಎಬಿವಿಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಕೇಂದ್ರ ಸರ್ಕಾರ ಜಾರಿಗೆ ತಂದ ಎನ್‌ಇಪಿ ಶಿಕ್ಷಣ ಪದ್ಧತಿ ರದ್ದುಗೊಳಿಸಿರುವುದನ್ನು ಖಂಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಷ್ಟ್ರೀಯ ಶಿಕ್ಷಣ ನೀತಿ -2020ಅನ್ನು ಹಿಂಪಡೆದುಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬ್ರಿಟಿಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣ ನೀತಿ ಪಡೆಯಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ದೇಶದಲ್ಲಿ ಒಂದೇ ರೀತಿಯ ಮತ್ತು ಆಧುನಿಕ ಜಗತ್ತಿನ ಸ್ಪರ್ಧೆಗೆ ಅನುಗುಣವಾಗುವಂತೆ ರೂಪಿಸಲಾದ ಶಿಕ್ಷಣ ನೀತಿ ಇದಾಗಿದೆ. ಇದು ಭಾರತೀಯ ಶಿಕ್ಷಣ ನೀತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರ ಇದನ್ನು ಜಾರಿಗೆ ತಂದಾಗ ಅದನ್ನು ಅನುಷ್ಟಾನಗೊಳಿಸುವಲ್ಲಿ ಕರ್ನಾಟಕ ರಾಜ್ಯ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆಯುತ್ತೇವೆ ಎಂದು ಹೇಳಿತ್ತು. ಇದೀಗ ತನ್ನ ಪ್ರಣಾಳಿಕೆಯಂತೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾಗಿ ರಾಜ್ಯ ಶಿಕ್ಷಣ ಜಾರಿಗೆ ಹೊರಟಿದೆ. ಇದು ಖಂಡನಾರ್ಹ ಎಂದು ಪ್ರತಿಭಟಕಾರರು ತಿಳಿಸಿದರು.

ಕೇವಲ ರಾಜಕೀಯ ಕಾರಣಕ್ಕೋಸ್ಕರ ಒಂದು ಉತ್ತಮ ಪ್ರಯೋಗಶೀಲ ಶಿಕ್ಷಣ ಪದ್ಧತಿ ಬದಲಾವಣೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಹೊರಟಿರುವ ಸರ್ಕಾರದ ನಡೆ ಖಂಡನೀಯ. ಈ ನಿಲುವಿನಿಂದಾಗಿ ಮುಂದಿನ ಪೀಳಿಗೆಗೆ ನಿಜಕ್ಕೂ ದೊಡ್ಡ ನಷ್ಟ ಉಂಟಾಗಲಿದೆ. ಉತ್ತಮ ಅವಕಾಶವೊಂದು ಕೈತಪ್ಪಲಿದೆ ಎಂದರು.

ಎನ್ಇಪಿ ಜಾರಿ ಮಾಡಿದ ಕಾರಣಕ್ಕೋಸ್ಕರ ನೂರಾರು ಕೋಟಿ ರು. ಅನುದಾನವನ್ನು ಪಿಎಂ ಉಷಾ ಯೋಜನೆಯಡಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ನೀಡಿದೆ. ಒಂದು ವೇಳೆ ಎನ್ಇಪಿ ರದ್ದುಪಡಿಸಿದ್ದೇ ಆದಲ್ಲಿ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರ ನೀಡಿದ ಅನುದಾನ ರಾಜ್ಯ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರಲ್ಲದೆ, ಎನ್ಇಪಿಯಲ್ಲಿ ಏನಾದರೂ ಲೋಪದೋಷಗಳಿದ್ದರೆ, ಅದನ್ನು ಸರಿ ಮಾಡಿ ರಾಜ್ಯದಲ್ಲಿ ಎನ್ಇಪಿ ಮಾಡಬೇಕು. ಈ ದೇಶದ ಶಿಕ್ಷಣ ಪದ್ಧತಿಯೊಂದಿಗೆ ಕರ್ನಾಟಕ ರಾಜ್ಯವನ್ನಾಗಿ ತೆಗೆದುಕೊಂಡು ಹೋಗುವ ಮಹತ್ತರ ಜವಾಬ್ದಾರಿ ಮಾಡಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾದೀತು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಹೆಚ್.ಕೆ. ಪ್ರವೀಣ್, ನಗರ ಕಾರ್ಯದರ್ಶಿ ರಘುನಂದನ್ ಹೆಗ್ಡೆ, ಲೋಹಿತ್, ಬಿ. ಅಭಿಷೇಕ್, ವರುಣ್, ಮನೋಜ್, ವೇದಶ್ರೀ ಇನ್ನಿತರರು ಉಪಸ್ಥಿತರಿದ್ದರು.