ಸಾರಾಂಶ
ವಿವಿಧ ಬೇಡಿಕಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ರಾಜ್ಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹಾಸ್ಟೆಲ್ ಗಳನ್ನು ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ವಿನೋದ್ ರಾಂಪುರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಒಂದೆಡೆ ಬಸ್ ಸೌಕರ್ಯವಿಲ್ಲ. ಮತ್ತೊಂದೆಡೆ ಹಾಸ್ಟೆಲ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೆಟ್ಟುಬಿದ್ದಿದೆ ಎಂದರು.
ಶಾಲಾ- ಕಾಲೇಜುಗಳು ಪ್ರಾರಂಭವಾಗಿದ್ದು ವಿಳಂಬ ಮಾಡದೆ ಹಾಸ್ಟೆಲ್ ಆಯ್ಕೆ ಪ್ರವೇಶಾತಿ ಪ್ರಕ್ರಿಯೆ ಶುರುಗೊಳಿಸಬೇಕು. ಶಕ್ತಿ ಯೋಜನೆ ಶುರುವಾದ ಬಳಿಕ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸಿಗದೆ ಒದ್ದಾಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಹಾಸ್ಟೆಲ್ ಗಳ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಬೇಕು ಹಾಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡವನ್ನ ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಂಚಾಲಕ ಸುರೇಶ ಬಡಿಗೇರ ಮಾತನಾಡಿದರು. ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ , ತಾಲೂಕು ಸಂಚಾಲಕ ಓಂಕಾರಗೌಡ, ಜಿಲ್ಲಾ ಸಮಿತಿ ಸದಸ್ಯರಾದ ನವೀನ, ಮಾರುತಿ, ಸಾಗರ, ಪವನ ಕುಮಾರ್, ಸಾಗರ, ಬಿ.ಭದ್ರಿಗೌಡ, ಅನಿರುದ್ಧ್, ಭರತ್, ನರೇಂದ್ರ, ವೆಂಕಟೇಶ, ಚನ್ನಬಸವ ಇತರರಿದ್ದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.