ಎನ್‌ಇಪಿ ಹಿಂಪಡೆಯದಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

| Published : May 15 2024, 01:33 AM IST

ಸಾರಾಂಶ

ದೇಶದಲ್ಲಿ ಭಾರತೀಯ ಶಿಕ್ಷಣ ನೀತಿ ಜಾರಿಗೆ ತಂದು, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಒಂದೇ ರೀತಿಯ ಶಿಕ್ಷಣ ಪದ್ಧತಿ ಇರಬೇಕು. ಆ ಶಿಕ್ಷಣ ಪದ್ಧತಿ ಭಾರತೀಯ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಇನ್ನಿತರ ಕೌಶಲ್ಯ ನೀಡುವ ಉದ್ದೇಶ ಈ ನೀತಿಯಲ್ಲಿದೆ.

ಹುಬ್ಬಳ್ಳಿ:

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಿಂಪಡೆಯಲು ಮುಂದಾದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕರ್ನಾಟಕ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಇಲ್ಲಿನ ಕಿಮ್ಸ್‌ ಮುಖ್ಯದ್ವಾರದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕಿಮ್ಸ್‌ ಪ್ರವೇಶ ದ್ವಾರದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಎದುರು ಸಮಾವೇಶಗೊಂಡು, ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬ್ರಿಟಿಷ್‌ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ತಂದಿದೆ. ಅದೇ ರೀತಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಪ್ರಥಮ ಬಾರಿಗೆ ಅದನ್ನು ಅನುಷ್ಠಾನ ತರುವ ಕೆಲಸ ಮಾಡಿದೆ. ಆದರೆ ಇಂದಿನ ಕಾಂಗ್ರೆಸ್‌ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆದುಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದೇಶದಲ್ಲಿ ಭಾರತೀಯ ಶಿಕ್ಷಣ ನೀತಿ ಜಾರಿಗೆ ತಂದು, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಒಂದೇ ರೀತಿಯ ಶಿಕ್ಷಣ ಪದ್ಧತಿ ಇರಬೇಕು. ಆ ಶಿಕ್ಷಣ ಪದ್ಧತಿ ಭಾರತೀಯ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಇನ್ನಿತರ ಕೌಶಲ್ಯ ನೀಡುವ ಉದ್ದೇಶ ಈ ನೀತಿಯಲ್ಲಿದೆ. ಮುಂದಿನ 20-25 ವರ್ಷಗಳಲ್ಲಿ ಆಗಬಹುದಾದ ಬದಲಾವಣೆ ಮುಂದಿಟ್ಟುಕೊಂಡು ಈ ನೀತಿಯನ್ನು ಹಲವಾರು ಶಿಕ್ಷಣ ತಜ್ಞರು ತಯಾರಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಶಿಕ್ಷಣ ನೀತಿ ವಿರೋಧಿಸುವ ಮೂಲಕ ಬ್ರಿಟಿಷರ್‌ ಶಿಕ್ಷಣ ನೀತಿಯನ್ನೇ ಮುಂದುವರಿಸುವ ಧೋರಣೆಯನ್ನು ರಾಜ್ಯ ಸರ್ಕಾರ ತಾಳುತ್ತಿರುವುದು ಸರಿಯಲ್ಲ ಎಂದರು.

ಕೇವಲ ರಾಜಕಾರಣ ಹಾಗೂ ಸ್ವ ಪ್ರತಿಷ್ಠೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಎನ್‌ಇಪಿ ಜಾರಿಗೊಳಿಸುವ ಮೂಲಕ ಪಿಎಂ ಉಷಾ ಯೋಜನೆಯಡಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದನ್ನು ಅರಿಯದ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುತ್ತಿರುವುದು ಸರಿಯಲ್ಲ. ಎನ್‌ಇಪಿ ವಿರೋಧಿಸುವುದರಿಂದ ಕೇಂದ್ರ ಸರ್ಕಾರ ವಿವಿಗಳಿಗೆ ನೀಡಿದ ಅನುದಾನ ವಾಪಸ್‌ ಹೋಗಲಿದೆ. ಇದರಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದಂತೆ ಆಗುತ್ತದೆ ಎಂದು ಆರೋಪಿಸಿದರು.

ಆನಂತರ ತಹಸೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಎಬಿವಿಪಿ ಕರ್ನಾಟಕ ದಕ್ಷಿಣ ರಾಜ್ಯ ಕಾರ್ಯದರ್ಶಿ ಪ್ರವೀಣ್‌ ಎಚ್‌.ಕೆ., ಕಾರ್ಯದರ್ಶಿ ಸಚಿನ ಕುಳಗೇರಿ ಸೇರಿದಂತೆ ಅನೇಕರಿದ್ದರು.