ಡ್ರಗ್ಸ್ ಜಾಲವನ್ನು ಬುಡಮಟ್ಟದಿಂದ ಕಿತ್ತು ಹಾಕಲು ಆಗ್ರಹ

| Published : Jul 31 2025, 12:45 AM IST

ಡ್ರಗ್ಸ್ ಜಾಲವನ್ನು ಬುಡಮಟ್ಟದಿಂದ ಕಿತ್ತು ಹಾಕಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸ್ಕೃತಿಕ ನಗರಿ, ಸುಸಂಸ್ಕೃತ ಜನರಿರುವ ಸ್ವಚ್ಚ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದ್ದು ಆತಂಕಕಾರಿ ಸಂಗತಿ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡ್ರಗ್ಸ್ ಜಾಲವನ್ನು ಬುಡಮಟ್ಟದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟಿಸಿದರು.ಸಾಂಸ್ಕೃತಿಕ ನಗರಿ, ಸುಸಂಸ್ಕೃತ ಜನರಿರುವ ಸ್ವಚ್ಚ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದ್ದು ಆತಂಕಕಾರಿ ಸಂಗತಿ. ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆಯಿಂದಾಗಿ ಮೈಸೂರಿನ ಹೊರ ವರ್ತುಲ ರಸ್ತೆಯ ಬಳಿ 390 ಕೋಟಿಗೂ ಹೆಚ್ಚು ಮೊತ್ತದ ಮಾದಕ ದ್ರವ್ಯ ದಾಸ್ತಾನಿದ್ದ ಡ್ರಗ್ಸ್ ತಯಾರಿಕಾ ಫ್ಯಾಕ್ಟರಿ ಪತ್ತೆ ಹಚ್ಚಲಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಡ್ರಗ್ಸ್ ತಯಾರಿಕೆ ಹಾಗೂ ಮಾರಾಟ ನಡೆಯುತ್ತಿದ್ದರೂ ಪೊಲೀಸ್ ಇಲಾಖೆಗೆ ತಿಳಿಯದೆ ಇದ್ದಿದ್ದು ಸೋಜಿಗದ ಸಂಗತಿ ಎಂದು ಅವರು ಕಿಡಿಕಾರಿದರು.ಈ ಡ್ರಗ್ಸ್ ಫ್ಯಾಕ್ಟರಿ ಪತ್ತೆಯ ನಂತರ ಗೃಹ ಸಚಿವರು ಜಾಣ ಕುರುಡರಂತೆ ಇದುವರೆಗೂ ಈ ಜಾಲವನ್ನು ಬೇಧಿಸದಿರುವುದು ಗೃಹ ಇಲಾಖೆಯ ತಪ್ಪೆಂದು ಒಪ್ಪಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ರಾಜ್ಯದ ಪ್ರಭಾವಿ ಸಚಿವರೊಬ್ಬರ ಆಪ್ತನೊಬ್ಬನು ಕೂಡ ಡ್ರಗ್ಸ್ ಪೂರೈಕೆ ಹಾಗೂ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ. ರಾಜ್ಯದ ಸಚಿವರ ಮೂಗಿನ ಅಳತೆಯಲ್ಲಿಯೇ ಡ್ರಗ್ಸ್ ಪೂರೈಕೆಯ ಜಾಲವಿರುವುದು ಎಂಬ ಸಂಶಯ ದೃಢವಾಗಿದೆ ಎಂದು ಅವರು ಆರೋಪಿಸಿದರು.ಈ ಹಿಂದೆ ಬೆಂಗಳೂರು, ಮಂಗಳೂರಿನಂತಹ ಬೃಹತ್ ನಗರಗಳಲ್ಲಿ ಯಾವ ಅಡ್ಡಿ, ಆತಂಕ ಇಲ್ಲದಂತೆ ಡ್ರಗ್ಸ್, ಮಾಫಿಯಾ ಸಕ್ರಿಯವಾಗಿರುವುದು ಜಗತ್ತಿಗೆ ತಿಳಿದಿರುವ ಸತ್ಯ. ಆದರೆ, ಮೈಸೂರಿನಲ್ಲಿ ಡ್ರಗ್ಸ್ ಮಾಫಿಯ ಸಕ್ರಿಯವಾಗಿರುವುದು ಆತಂಕಕಾರಿ ಮಾತ್ರವಲ್ಲ ಅತ್ಯಂತ ಗಂಭೀರ ವಿಷಯ. ಡ್ರಗ್ಸ್, ಇನ್ನಿತರ ಮಾದಕ ವಸ್ತುಗಳ ಪ್ರಭಾವಕ್ಕೊಳಗಾಗಿ ದೇಶದ ಯುವ ಸಮುದಾಯ ಸಾಕಷ್ಟು ನಷ್ಟಕ್ಕೆ ಒಳಗಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಯುವಜನರ ಹಾಗೂ ಸಮಾಜದ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಡ್ರಗ್ಸ್ ತಯಾರಿಕೆ ಮತ್ತು ಪೂರೈಕೆ ಜಾಲವನ್ನು ಬೇರು ಮಟ್ಟದಿಂದ ಕಿತ್ತು ಹಾಕಬೇಕು ಎಂದು ಅವರು ಒತ್ತಾಯಿಸಿದರು.ಎಬಿವಿಪಿ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.