ಸಾರಾಂಶ
ಒಟ್ಟು ರೆರ್ಸಾಟ್‌ಗಳ ಸಂಖ್ಯೆ ಹಾಗೂ ರೆಸಾರ್ಟ್ ಯಾರ ಹೆಸರಿನಲ್ಲಿದೆ ಎಂಬುದನ್ನು ನಿಖರ ಮಾಹಿತಿ ಪಡೆದು ಈ ಎಲ್ಲ ಜಾಗದ ಸರ್ವೆ ಮಾಡಿ ನಕ್ಷೆ ಸಹಿತ ಎರಡು ದಿನದಲ್ಲಿ ವರದಿ ನೀಡುವಂತೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗೋಕರ್ಣ: ಅನಧಿಕೃತ ರೆಸಾರ್ಟ್, ಹೋಂ ಸ್ಟೇ, ಹೋಟೆಲ್‌ಗಳನ್ನು ಸರ್ವೆ ಮಾಡಿ ಎರಡು ದಿನದೊಳಗೆ ವರದಿ ನೀಡುವಂತೆ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾವಿಕೊಡ್ಲ ಗ್ರಾಮದ ದುಬ್ಬನಸಶಿ, ಗಂಗೆಕೊಳ್ಳ, ಕಡಲತೀರ, ನಾಡುಮಾಸ್ಕೇರಿಯಲ್ಲಿ ತಲೆ ಎತ್ತಿರುವ ಅನಧಿಕೃತ ರೆಸಾರ್ಟ್, ಹೋಮ್ ಸ್ಟೇ, ಹೋಟೆಲ್‌ಗಳಿಗೆ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್ ಸತೀಶ ಗೌಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.ಒಟ್ಟು ರೆರ್ಸಾಟ್‌ಗಳ ಸಂಖ್ಯೆ ಹಾಗೂ ರೆಸಾರ್ಟ್ ಯಾರ ಹೆಸರಿನಲ್ಲಿದೆ ಎಂಬುದನ್ನು ನಿಖರ ಮಾಹಿತಿ ಪಡೆದು ಈ ಎಲ್ಲ ಜಾಗದ ಸರ್ವೆ ಮಾಡಿ ನಕ್ಷೆ ಸಹಿತ ಎರಡು ದಿನದಲ್ಲಿ ವರದಿ ನೀಡುವಂತೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಜಾಗದಲ್ಲಿ ಯಾವುದೇ ಖಾಸಗಿ ಕಟ್ಟಡಗಳಿದ್ದರೂ ತೆರವಿಗೆ ಆದೇಶ ನೀಡಲಾಗುವುದು ಎಂದರು. ಕಡಲತೀರ ಹಾಗೂ ರಸ್ತೆಗಳನ್ನು ನುಂಗಿರುವ ಈ ಕಟ್ಟಡಡಗಳಿಂದ ನಿತ್ಯ ಜನರು ಸಂಚರಿಸಲು ತೊಂದರೆಯಾಗುತ್ತಿರುವುದು, ಬಸ್ ಸಂಚಾರ ಸ್ಥಗಿತಗೊಂಡಿರುವುದು, ಹೊರ ರಾಜ್ಯದ ಅರಿಯದ ವ್ಯಕ್ತಿಗಳು ನೆಲೆಸಿರುವುದರಿಂದ ತೊಂದರೆ ಸೇರಿದಂತೆ ಹಲವು ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿಯು ಸಂಬಂಧಿಸಿದ ಇಲಾಖೆಗೆ ದೂರು ನೀಡಿತ್ತು. ಆದರೂ ಕ್ರಮ ಕೈಗೊಳ್ಳದಿರುವ ಹಿನ್ನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಗುರುವಾರ ಕುಮಟಾ ಉಪವಿಭಾಗಾಧಿಕಾರಿ ಭೇಟಿ ಮಾಡಿ ತುರ್ತು ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಸಿದ್ದರು. ಇದರ ಪರಿಣಾಮ ಅಧಿಕಾರಿಗಳು ಆಗಮಿಸಿ ಸೂಕ್ತ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಈ ವೇಳೆ ಭೂಮಾಪನಾ ಇಲಾಖೆಯ ಆನಂದ, ಕಂದಾಯ ನಿರೀಕ್ಷಕ ಸಂತೋಷ ಶೇಟ್, ಗ್ರಾಮಲೆಕ್ಕಾಧಿಕಾರಿ ಸೋಮಶೇಖರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಾಯಕ ನಾಯ್ಕ, ಕಾರ್ಯದರ್ಶಿ ಶ್ರೀಧರ ಭೋಮಕರ, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.ಸ್ಥಳ ನೋಡಿ ದಂಗಾದ ಅಧಿಕಾರಿಗಳು
ಕಡಲತೀರದಲ್ಲಿ ಮಣ್ಣು ತುಂಬುತ್ತಿದ್ದು, ಕಡಲ ತಟ ಮುಚ್ಚಿ ಹೋಗುವ ಸ್ಥಿತಿ ನೋಡಿ ಅಧಿಕಾರಿಗಳು ಕಂಗಾಲಾದರು. ಹಲವೆಡೆ ಅಧಿಕಾರಿಗಳ ವಾಹನಗಳೇ ಸಂಚರಿಸಲಾಗದಷ್ಟು ಕಿರಿದಾಗಿದ್ದು, ಎಲ್ಲೆಡೆ ಅಂಗಡಿ ಮುಂಗಟ್ಟುಗಳು ನಿಗದಿತ ಜಾಗಕ್ಕಿಂತ ಮುಂದೆ ಬಂದಿರುವುದು, ಮೀನುಗಾರರ ದೋಣಿ ನಿಲ್ಲಿಸಲು ಸ್ಥಳಾವಕಾಶ ಇಲ್ಲದಿರುವುದನ್ನು ಗಮನಿಸಿದ್ದು, ತ್ವರಿತವಾಗಿ ಕ್ರಮ ಕೈಗೊಳ್ಳುವ ಭರವಸೆ ಮೂಡಿದೆ.