ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆವಕ್ಫ್ ಮಂಡಳಿ ಹೆಸರಿನಲ್ಲಿ ರಾಜ್ಯದ ರೈತರು, ಮಠ ಮಾನ್ಯ, ಮಂದಿರಗಳ ಆಸ್ತಿ ಕಬಳಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟಿಸಿ, ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದ ಮಾಜಿ ಸಚಿವರು, ಪರಾಜಿತ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ 35ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.
ನಗರದ ಕೆಬಿ ಬಡಾವಣೆಯ ಬಿಜೆಪಿ ಜಿಲ್ಲಾ ಕಚೇರಿಯಿಂದ ಪಕ್ಷದ ಮುಖಂಡರು, ಮಾಜಿ ಸಚಿವರು, ಹಿರಿಯ ಮುಖಂಡರ ನೇತೃತ್ವದಲ್ಲಿ ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ, ಸಿಎಂ ಸಿದ್ದರಾಮಯ್ಯ, ವಕ್ಫ್ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಕಚೇರಿ ಬಳಿ ಸುಮಾರು 30 ನಿಮಿಷ ರಸ್ತೆ ತಡೆದು, ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.ಈ ವೇಳೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಕ್ಫ್ ಸಚಿವ ಜಮೀರ್ ಅಹಮ್ಮದ್ ಸೂಪರ್ ಸಿಎಂನಂತೆ ವರ್ತಿಸುತ್ತಿರುವುದು ಖಂಡನೀಯ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿರುವ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವು ಹಿಂದುಗಳು, ರೈತರು, ಮಠ ಮಾನ್ಯ, ದೇವಸ್ಥಾನಗಳ ಮೇಲೆ ಕಣ್ಣು ಹಾಕಿದೆ. ಅದಕ್ಕಾಗಿ ವಕ್ಪ್ ಮಂಡಳಿ ಮುಖಾಂತರ ನೋಟಿಸ್ ಜಾರಿಗೊಳಿಸುವ ಮೂಲಕ ರೈತರು, ಮಠ ಮಂದಿರ, ದೇವಸ್ಥಾನಗಳ ಆಸ್ತಿ ಕಬಳಿಸಲು ಮುಂದಾಗಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹಮ್ಮದ್ ಕ್ಯಾನ್ಸರ್ ಇದ್ದಂತೆ. ಧರ್ಮಾಂಧತೆಯ ಮೂಲಕ ಹಿಂದೂ ಸಮಾಜ, ಮಠ ಮಾನ್ಯಗಳು, ದೇವಸ್ಥಾನಗಳ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಇದೇ ಜಮೀರ್ ಅಹಮ್ಮರ್ ಹೇಳಿದ್ದರಿಂದಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ರೈತರು, ಮಠ ಮಾನ್ಯ, ಮಂದಿರಗಳ ಪಹಣಿಯಲ್ಲಿ ವಕ್ಪ್ ಮಂಡಳಿ ಹೆಸರನ್ನು ನಮೂದಿಸಲು ಸಾಧ್ಯ. ಇಲ್ಲವಾದರೆ ಇಲ್ಲ. ಇದೀಗ ಜಮೀರ್ ಅಹಮ್ಮದ್ ಅದನ್ನೇ ಬಳಸಿಕೊಂಡು, ಹಿಂದುಗಳ ಆಸ್ತಿ, ಹಿಂದುಗಳ ಶ್ರದ್ಧಾಕೇಂದ್ರ, ಮಠ ಮಾನ್ಯಗಳ ಮೇಲೆ ಕಣ್ಣು ಹಾಕಿದ್ದಾರೆ ಎಂದು ಅವರು ಆರೋಪಿಸಿದರು.ರೈತರು, ಜನ ಸಾಮಾನ್ಯರು, ಮಠ ಮಾನ್ಯಗಳು, ದೇವಸ್ಥಾನಗಳ ಜಮೀನುಗಳನ್ನು ವಕ್ಫ್ ಮಂಡಳಿ ಹೆಸರಿನಲ್ಲಿ ಕಬಳಿಸುತ್ತಿರುವುದನ್ನು ವಿರೋಧಿಸಿ ರಾಜ್ಯವ್ಯಾಪಿ ಇಂದು ಹೋರಾಟ ನಡೆಸಿದ್ದೇವೆ. ಈ ಹೋರಾಟ ನಿರಂತರ ಇರಲಿದೆ. ಪಹಣಿ ಕಾಲಂ 11ರಲ್ಲಿ ವಕ್ಫ್ ಮಂಡಳಿ ಹೆಸರನ್ನು ನಮೂದಿಸುವ ಮೂಲಕ ಆಸ್ತಿ ಕಬಳಿಸುವುದನ್ನು ತಕ್ಷಣ ನಿಲ್ಲಿಸಬೇಕು. ಯಾವುದೇ ರೈತರು, ಇತರರು ವಕ್ಫ್ ಮಂಡಳಿ ಹೆಸರಿನಲ್ಲಿ ಆಸ್ತಿ ಕಳೆದುಕೊಂಡಿದ್ದರೂ ಅಂತಹವರ ನೆರವಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಹಾಯಕ್ಕೆ ಮುಂದಾಗುತ್ತಿಲ್ಲ. ರಾಜ್ಯದ ಯಾವೊಬ್ಬ ಕಾಂಗ್ರೆಸ್ಸಿನ ಸಚಿವರು, ಶಾಸಕರು ಸಹ ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ರೇಣುಕಾಚಾರ್ಯ ಹರಿಹಾಯ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರವು ವಕ್ಫ್ ಮಂಡಳಿ ಹೆಸರಿನಲ್ಲಿ ರೈತರು, ಜನ ಸಾಮಾನ್ಯರು, ಮಠ ಮಾನ್ಯಗಳು, ಮಂದಿರಗಳ ಆಸ್ತಿ ಕಬಳಿಸಲು ನೋಟಿಸ್ ಜಾರಿ ಮಾಡಿದ್ದನ್ನು ಖಂಡಿಸಿ, ಬಿಜೆಪಿ ರಾಜ್ಯವ್ಯಾಪಿ ಹೋರಾಟ ಕೈಗೊಂಡಿದೆ. ಸಂತ್ರಸ್ಥರಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಪಹಣಿ ಪರಿಶೀಲನಾ ಅಭಿಯಾನ ಆರಂಭಿಸಿದ್ದೇವೆ. ಯಾರೇ ಆಗಿರಲಿ ವಕ್ಫ್ ಮಂಡಳಿಯಿಂದ ಸಮಸ್ಯೆಗೆ ಒಳಗಾಗಿದ್ದರೆ ದೂ.ಸಂ: 98450-95096ಗೆ ಕರೆ ಮಾಡಿ ಅಥವಾ ವಾಟ್ಸಪ್ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಎಚ್.ಪಿ.ರಾಜೇಶ, ಎಂ.ಬಸವರಾಜ ನಾಯ್ಕ, ಯುವ ಮುಖಂಡರಾದ ಜಿ.ಎಸ್.ಅನಿತಕುಮಾರ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಅಣಬೇರು ಜೀವನಮೂರ್ತಿ, ಡಿ.ಬಸವರಾಜ ಗುಬ್ಬಿ, ಅನಿಲಕುಮಾರ ನಾಯ್ಕ, ಅಣ್ಣೇಶ, ಶಿವನಹಳ್ಳಿ ರಮೇಶ, ಭಾಗ್ಯ ಪಿಸಾಳೆ, ಎಚ್.ಸಿ. ಜಯಮ್ಮ, ಬಿ.ಎಂ.ಸತೀಶ, ಎಚ್.ಎನ್.ಗುರುನಾಥ, ಆರ್.ಶಿವಾನಂದ, ಐರಣಿ ಕುಮಾರ, ಕೆ.ಪ್ರಸನ್ನಕುಮಾರ, ಕೆ.ಎಂ.ವೀರೇಶ ಪೈಲ್ವಾನ್, ಶಿವನಗೌಡ ಪಾಟೀಲ, ಸೋಗಿ ಗುರು, ಟಿಂಕರ್ ಮಂಜಣ್ಣ, ಎಸ್.ಟಿ.ಯೋಗೇಶ್ವರ, ಜಗದೀಶ ಕುಮಾರ ಪಿಸೆ, ಶಂಕರಗೌಡ ಬಿರಾದಾರ್, ಕೆಟಿಜೆ ನಗರ ಆನಂದ, ಕೊಟ್ರೇಶ ಗೌಡ ನಿಟುವಳ್ಳಿ, ಪ್ರಭು ಕಲಬುರಗಿ, ಕೆಟಿಜೆ ನಗರ ಲೋಕೇಶ, ನಿಂಗರಾಜ ರೆಡ್ಡಿ, ಮಂಜುನಾಥ ಪೈಲ್ವಾನ್, ಪ್ರವೀಣ ಜಾಧವ್, ರಾಜು ವೀರಣ್ಣ, ಎನ್.ಎಚ್.ಹಾಲೇಶ ನಾಯ್ಕ ಇತರರು ಇದ್ದರು.