ರೈತನಿಂದ ಪಡೆದಿದ್ದ ಹೆಚ್ಚುವರಿ ಹಣ ವಾಪಸ್ ಕೊಡಿಸಿದ ಎಸಿ

| Published : Feb 06 2025, 11:45 PM IST

ಸಾರಾಂಶ

ಸಿಬ್ಬಂದಿಯನ್ನು ತಕ್ಷಣ ಅಮಾನತು ಮಾಡಿ ಎಂದು ದೂರುದಾರ ಕೆ.ಆರ್.ಎಸ್ ಪಕ್ಷದ ಅಧ್ಯಕ್ಷ ನಾಗರಾಜು ಎಸಿ ಅವರಿಗೆ ಲಿಖಿತ ದೂರು ನೀಡಿದ್ದು, ಲಂಚ ಪಡೆದ ನೌಕರನ ವಿರುದ್ಧ ಕ್ರಮ ಜರುಗಿಸುವುದಾಗಿ ಎಸಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಭೂ ದಾಖಲೆ ನೀಡಲು ಅಭಿಲೇಖಾಲಯದ ಸಿಬ್ಬಂದಿಯು ರೈತನಿಂದ ಪಡೆದಿದ್ದ ಹೆಚ್ಚುವರಿ ಹಣವನ್ನು ಉಪವಿಭಾಗಾಧಿಕಾರಿ ಡಾ.ಶ್ರೀನಿವಾಸ್ ವಾಪಸ್ ಕೊಡಿಸಿ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯ ನೆಲಮಾಳಿಗೆಯಲ್ಲಿರುವ ಅಭಿಲೇಖಾಲಯದಿಂದ ರೈತನಿಗೆ ದಾಖಲೆ ನೀಡಲು ನಿಗದಿಗಿಂತಲೂ ಹೆಚ್ಚು ಹಣ ಪಡೆಯುವ ಜೊತೆಗೆ ಸರ್ಕಾರದ ಖಾತೆಗೆ ಜಮೆ ಕೂಡಾ ಮಾಡದೇ ಎಲ್ಲಾ ಹಣವನ್ನು ಪ್ರಶಾಂತ್ ಎಂಬ ಸಿಬ್ಬಂದಿಯೇ ಜೇಬಿಗೆ ಇಳಿಸಿಕೊಂಡಿದ್ದನು.

ಈ ಬಗ್ಗೆ ಕೆಆರ್ ಎಸ್ ಪಕ್ಷದ ಅಧ್ಯಕ್ಷ ನಾಗರಾಜು ಅವರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ನಿಂತು ರೈತನಿಂದ ಪಡೆದಿದ್ದ ಹೆಚ್ಚುವರಿ 950 ರು. ವಾಪಸ್ ಕೊಡಿಸುವ ಜೊತೆಗೆ ಉಳಿಕೆ ಹಣಕ್ಕೆ ರಶೀದಿ ಹಾಕಿಸಿದ ಘಟನೆ ನಡೆಯಿತು. ಈ ಸಮಯದಲ್ಲಿ ತಹಸೀಲ್ದಾರ್ ಡಾ.ಅಶೋಕ್ ಹಾಜರಿದ್ದರು.

ಸಿಬ್ಬಂದಿಯನ್ನು ತಕ್ಷಣ ಅಮಾನತು ಮಾಡಿ ಎಂದು ದೂರುದಾರ ಕೆ.ಆರ್.ಎಸ್ ಪಕ್ಷದ ಅಧ್ಯಕ್ಷ ನಾಗರಾಜು ಎಸಿ ಅವರಿಗೆ ಲಿಖಿತ ದೂರು ನೀಡಿದ್ದು, ಲಂಚ ಪಡೆದ ನೌಕರನ ವಿರುದ್ಧ ಕ್ರಮ ಜರುಗಿಸುವುದಾಗಿ ಎಸಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.

ಕೆ.ಆರ್.ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಂ, ಸಹ ಕಾರ್ಯದರ್ಶಿ ಬಸವರಾಜ್, ಶ್ರೀನಿವಾಸ್ ಮತ್ತು ರೈತ ಪ್ರಕಾಶ್ ಹಾಜರಿದ್ದರು.