ಸಾರಾಂಶ
ನಿರ್ಲಕ್ಷ್ಯ ಧೋರಣೆ ಮುಂದುವರಿಸದೇ, ಆಡಳಿತರೂಢ ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಬೇಕು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಒಳಮೀಸಲಾತಿ ಸಮೀಕ್ಷಾ ವರದಿಯನ್ನು ಜುಲೈ ೩೦ರೊಳಗೆ ಸಲ್ಲಿಸಲಾಗುತ್ತಿದೆ. ಆ.೧೧ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಸರ್ವಪಕ್ಷಗಳ ಅನುಮೋದನೆಯೊಂದಿಗೆ ಒಳಮೀಸಲಾತಿ ಬೇಡಿಕೆ ಅಂಗೀಕರಿಸಿಬೇಕು ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಮಹಾಲಿಂಗಪುರ ಘಟಕದ ಮುಖ್ಯಸ್ಥ ಅರ್ಜುನ ದೊಡಮನಿ ತಿಳಿಸಿದರು.ಸ್ಥಳೀಯ ಜಿಎಲ್ಬಿಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೪ ಆಗಸ್ಟ್ ೧ರಂದು ಸರ್ವೋಚ್ಛ ನ್ಯಾಯಾಲಯ ಪರಿಶಿಷ್ಟರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರಗಳು ಆದ್ಯತೆಯ ಮೇರೆಗೆ ಜಾರಿಗೊಳಿಸಬಹುದು ಎಂಬ ಐತಿಹಾಸಿಕ ತೀರ್ಪು ನೀಡಿ ಒಂದುವರ್ಷ ಗತಿಸುತ್ತಿದೆ. ಎರಡೇ ತಿಂಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಜನಸಂಖ್ಯಾ ಸಮೀಕ್ಷೆ ಪೂರ್ಣಗೊಳಿಸಿ ತಮ್ಮ ನೈತಿಕ ಜವಾಬ್ದಾರಿ ಪೂರೈಸಿದ್ದರೆ, ೩೦ವರ್ಷಗಳ ಒಳಮೀಸಲಾತಿ ಹೋರಾಟ ಮತ್ತೊಂದು ಸುತ್ತಿನ ಹೋರಾಟವಾಗಿ ಪರಿವರ್ತನೆಯಾಗುವ ಅಗತ್ಯವಿರಲಿಲ್ಲ ಎಂದು ತಿಳಿಸಿದರು.ಈಗಲಾದರೂ ಇಂತಹ ನಿರ್ಲಕ್ಷ್ಯ ಧೋರಣೆ ಮುಂದುವರಿಸದೇ, ಆಡಳಿತರೂಢ ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಬೇಕು. ವರದಿಯನ್ನು ಆದಷ್ಟು ಬೇಗ ಪಡೆದು ಜಾರಿಗೆ ತಂದರೆ ೩೦ ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಆಗುವ ಮೂಲಕ ನಿರುದ್ಯೋಗಿ ಯುವಕ, ಯುವತಿಯರು ಉದ್ಯೋಗ ಪಡೆಯುವಂತಾಗುತ್ತದೆಂದರು. ವಿಷಾದಕರ ಸಂಗತಿ ಎಂದರೆ ಕಳೆದ ೩೦ವರ್ಷಗಳಲ್ಲಿ ಆಯೋಗ ನೇಮಕವಾಗಲು, ನೇಮಕವಾದ ಆಯೋಗಕ್ಕೆ ಅನುದಾನ ನೀಡಲು, ಸರ್ಕಾರಕ್ಕೆ ಒಪ್ಪಿಸಿದ ವರದಿ ಅನುಷ್ಠಾನಗೊಳಿಸಲು ೩ ದಶಕಗಳ ಕಾಲ ವಿಳಂಬ ಮುಂದುವರೆದಿರುವುದರಿಂದ ನೊಂದ ಸಮುದಾಯಗಳು ಯಾವುದೇ ಸರ್ಕಾರಗಳನ್ನು ನಂಬುವ ಸ್ಥಿತಿಯಲ್ಲಿಲ್ಲ ಎಂದು ಆರೋಪಿಸಿದರು.
ಸಮಿತಿ ಮುಖಂಡ ವಿಠ್ಠಲ ಹೊಸಮನಿ ಮತ್ತು ಲಕ್ಷ್ಮಣ ಮಾಂಗ ಮಾತನಾಡಿ, ಈ ಕಹಿ ಅನುಭವಗಳು ಮುಂದುವರೆಯದಂತೆ ಆ.೧೧ರಿಂದ ಆರಂಭವಾಗಲಿರುವ ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ತೀರ್ಮಾನವನ್ನು ಕೈಗೊಳ್ಳುವ ಮೂಲಕ ಸರ್ಕಾರ ನುಡಿದಂತೆ ನಡೆಯಬೇಕಿದೆ. ನಮ್ಮ ಹಕ್ಕಿಗಾಗಿ ಹೋರಾಟ ಮುಂದುವರಿಯಲಿದ್ದು, ಅ.೧೧ರಿಂದಲೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟ ಅಹೋರಾತ್ರಿ ಸತ್ಯಾಗ್ರಹ ಮುಂದುವರಿಯಲಿದೆ. ಎಲ್ಲ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಈ ಹೋರಾಟಕ್ಕೆ ಕೈ ಜೋಡಿಸಬೇಕೆಂದು ವಿನಂತಿಸಿದರು.ಈ ವೇಳೆ ಭೀಮಶಿ ಗೌಂಡಿ, ಬಸಪ್ಪ ಮೇತ್ರಿ, ರಘು ಅಣ್ಣೆಪ್ಪಗೊಳ, ಶಿವು ದೊಡಮನಿ, ಮಹಾಲಿಂಗ ಮಾದರ, ಲಘಮನ್ನ ಪೂಜಾರಿ, ಸದಾಶಿವ ಮಾದರ, ಮಹಾದೇವ ಮುಗಳಖೋಡ, ಅರುಣ ಮೇತ್ರಿ, ಮಹಾಲಿಂಗಪ್ಪ ಕಟಕಭಾವಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.