ಸಂಘ,ಸಂಸ್ಥೆಗಳಲ್ಲಿ ಪರ, ವಿರೋಧ ಸಮಾನವಾಗಿ ಸ್ವೀಕರಿಸಿ: ಎಚ್.ಜಿ.ಚಂದ್ರಶೇಖರ್ ಸಲಹೆ

| Published : May 27 2024, 01:00 AM IST

ಸಂಘ,ಸಂಸ್ಥೆಗಳಲ್ಲಿ ಪರ, ವಿರೋಧ ಸಮಾನವಾಗಿ ಸ್ವೀಕರಿಸಿ: ಎಚ್.ಜಿ.ಚಂದ್ರಶೇಖರ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಹಲವರ ಶ್ರಮವಿದೆ. ಯಾವುದೇ ಸಂಪರ್ಕ ಸಾಧನಗಳಿಲ್ಲದ ಸಮಯದಲ್ಲಿಯೂ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತಿದ್ದರು. ಈಗ ಜನರಲ್ಲಿ ಉತ್ಸಾಹ ಇಲ್ಲದಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಆತ್ಮಾಲೋಕನ ಮಾಡಿಕೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಒಂದು ಸಂಘ, ಸಂಸ್ಥೆ ಎಂದಾಗ ಪರ,ವಿರೋಧ ಸಹಜ. ಎರಡನ್ನೂ ಸಮಾನವಾಗಿ ಸ್ವೀಕರಿಸಿ, ಮುನ್ನಡೆದಾಗಲೇ ಸಂಘವನ್ನು ಉನ್ನತಿಗೆ ತೆಗೆದುಕೊಂಡು ಹೋಗಲು ಸಾಧ್ಯ ಎಂದು ಟೂಡಾ ಮಾಜಿ ಅಧ್ಯಕ್ಷ ಹಾಗೂ ಕಾಫ್ ರಾಡ್ ಇಂಡಸ್ಟ್ರೀ ಮಾಲೀಕ ಎಚ್.ಜಿ.ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಮಿತ್ರ ವೃಂದ ತುಮಕೂರು ವತಿಯಿಂದ ಆಯೋಜಿಸಿದ್ದ 37ನೇ ವರ್ಷದ ಸರ್ವ ಸದಸ್ಯರ ಮಹಾಸಭೆ,ವಾರ್ಷಿಕ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಸಂಸ್ಥೆಯನ್ನು 37 ವರ್ಷಗಳ ಕಾಲ ನಡೆಸುವುದು ನಿಜಕ್ಕೂ ಒಳ್ಳೆಯ ಕೆಲಸ. ಇದರ ಹಿಂದೆ ದುಡಿದವರನ್ನು ಸ್ಮರಿಸುತ್ತಾ, ಅದನ್ನು ಮತ್ತಷ್ಟು ಬೆಳೆಸುವತ್ತ ಎಲ್ಲರೂ ಕೈಜೋಡಿಬೇಕೆಂದರು.

ಜಿಲ್ಲೆಯಲ್ಲಿ ದಕ್ಷಿಣದ ಜನಸಂಖ್ಯೆಗೆ ಹೊಲಿಸಿದರೆ ಸಂಘದ ಸದಸ್ಯರಾಗಿರುವವರ ಸಂಖೆ ಕಡಿಮೆ ಇದೆ. ಇದು ಮತ್ತಷ್ಟು ವಿಸ್ತಾರಗೊಳ್ಳಬೇಕು. ದಕ್ಷಿಣ ಕನ್ನಡದ ಜನತೆ ದುಡಿಮೆಗೆ ಮೊದಲ ಅದ್ಯತೆ ನೀಡುವುದರಿಂದ ಸಂಘ- ಸಂಸ್ಥೆಗಳಲ್ಲಿ ಪಾತ್ರ ವಹಿಸುವುದು ಕಡಿಮೆ. ಹಾಗೆಂದು ದೂಷಿಸುವ ಅಗತ್ಯವಿಲ್ಲ. ಅವರನ್ನು ಒಳಗೊಳ್ಳುವಂತೆ ಸಂಘ ಬೆಳೆಯಬೇಕಿದೆ. ಒಂದು ಸ್ವಂತ ಕಟ್ಟಡವಾದರೆ ಹೆಚ್ಚಿನ ಚಟುವಟಿಕೆ ನಡೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸಂಘದ ಸರ್ವ ಸದಸ್ಯರು ಪ್ರಯತ್ನಿಸಬೇಕೆಂದು ಎಚ್.ಜಿ.ಚಂದ್ರಶೇಖರ್ ಸಲಹೆ ನೀಡಿದರು.

ಚಾರ್ಟೆಡ್ ಅಕೌಂಟೆಂಟ್ ಜಯರಾಮಶೆಟ್ಟಿ ಮಾತನಾಡಿ, ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಹಲವರ ಶ್ರಮವಿದೆ. ಯಾವುದೇ ಸಂಪರ್ಕ ಸಾಧನಗಳಿಲ್ಲದ ಸಮಯದಲ್ಲಿಯೂ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತಿದ್ದರು. ಈಗ ಜನರಲ್ಲಿ ಉತ್ಸಾಹ ಇಲ್ಲದಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಆತ್ಮಾಲೋಕನ ಮಾಡಿಕೊಳ್ಳಬೇಕಿದೆ.ತೊಂದರೆಗೊಳಗಾದಾಗ ದಕ್ಷಿಣ ಕನ್ನಡ ಮಿತ್ರವೃಂದ ನೆನಪಿಗೆ ಬರುವುದಲ್ಲ. ಸದಾ ಸಂಘದ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದು ಸದಸ್ಯರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಮಿತ್ರ ವೃಂದದ ತುಮಕೂರು ಜಿಲ್ಲಾಧ್ಯಕ್ಷ ಅಮರನಾಥ ಶೆಟ್ಟಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ನನ್ನ ಶಕ್ತಿ ಮೀರಿ ಸಂಘವನ್ನು ಸದೃಢಗೊಳಿಸಲು ದುಡಿದಿದ್ದೇನೆ. ನನ್ನೊಂದಿಗೆ ಹಲವರು ಸಂಘದ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಸಕ್ರಿಯರಾಗಿ ಸಂಘದ ಏಳಿಗೆ ಮತ್ತು ಉನ್ನತಿಗಾಗಿ ದುಡಿಯೋಣ. 782 ಸದಸ್ಯರಿರುವ ಸಂಘ, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಹೊಂದುವ ಗುರಿ ಇದ್ದು, ಎಲ್ಲರೂ ಧನ ಸಹಾಯ ಮಾಡಿದರೆ, ನಿವೇಶನ ಕೊಂಡು, 2-3 ಕೋಟಿ ವೆಚ್ಚದಲ್ಲಿ ಸಂಘದ ಕಟ್ಟಡ ಕಟ್ಟಬೇಕಿದೆ. ಈ ಕನಸು ಅದಷ್ಟು ಬೇಗ ನನಸು ಮಾಡುವಂತೆ ತಮ್ಮೆಲ್ಲರಲ್ಲಿ ಕೋರುತ್ತೇನೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ನಿರ್ದೇಶಕ ರವಿ.ಎನ್.ಎಸ್, ದಕ್ಷಿಣ ಕನ್ನಡ ಮಿತ್ರ ವೃಂದ 36 ವರ್ಷಗಳನ್ನು ಪೂರೈಸಿ, 37ನೇ ವರ್ಷಕ್ಕೆ ಕಾಲಿಟ್ಟಿದೆ. ಸಮಾಜಸೇವೆಯೇ ಸಂಘದ ಉದ್ದೇಶವಾಗಿದೆ. ಪ್ರತಿ ವರ್ಷ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಸಂಘದಿಂದ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ದಕ್ಷಿಣ ಕನ್ನಡ ಮಿತ್ರವೃಂದದ ಕಾರ್ಯದರ್ಶಿ ವೆಂಕಟೇಶ್, ಎಂ.ಎಸ್.ಕಾರಂತ್, ಸೇರಿ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಪಾಲ್ಗೊಂಡಿದ್ದರು. ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.