ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಸರ್ಕಾರಿ ನೌಕರರು ಕ್ರೀಡಾಕೂಟದಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಸ್ಫೂರ್ತಿ ಮೆರೆಯುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒತ್ತಡದ ಕರ್ತವ್ಯ ನಿರ್ವಹಣೆಯ ನಡುವೆ ವೈಯಕ್ತಿಕ ಆರೋಗ್ಯದ ಹಿತದೃಷ್ಠಿಯಿಂದ ನೌಕರರಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ. ಕ್ರೀಡೆಯಲ್ಲಿ ಹಿನ್ನಡೆ ಅನುಭವಿಸಿದವರು ಮುಂದಿನ ಕ್ರೀಡಾಕೂಟದಲ್ಲಿ ಗೆಲುವಿಗಾಗಿ ಪ್ರಯತ್ನಿಸಬೇಕು. ಮಹಿಳೆಯರು ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಮನೆಯಲ್ಲಿನ ಹಿರಿಯರನ್ನು ಗೌರವದಿಂದ ನೋಡಿಕೊಳ್ಳುವಂತೆ ಎಡಿಸಿ ಗೀತಾ ಹುಡೇದ ನೌಕರರಿಗೆ ಕಿವಿಮಾತು ಹೆಳಿದರು.ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಮಾತನಾಡಿ ನೌಕರರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯವಾಗಿದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಸರ್ಕಾರಿ ನೌಕರರಿಗೆ ಒತ್ತಡಗಳು ಸಹಜ. ಒತ್ತಡಗಳಿಗೆ ಕಾರಣಗಳನ್ನು ನಾವೇ ಹುಡುಕಬೇಕಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ನಮ್ಮಲ್ಲಿ ಉತ್ಸಾಹ ಚಿಗುರೊಡೆಯಲಿದೆ. ಎಂದು ತಿಳಿಸಿದರು. ವೃತ್ತಿಜೀವನದಲ್ಲಿ ಸರ್ಕಾರಿ ನೌಕರರು ಒತ್ತಡದಿಂದ ಸಮಸ್ಯೆಗಳತ್ತ ಬೊಟ್ಟು ಮಾಡದೇ ಆಯಾ ದಿನದಂದೇ ಆಯಾ ಕೆಲಸಗಳನ್ನು ಪೂರ್ಣಗೊಳಿಸಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅವಶ್ಯವಿದೆ. ಕ್ರೀಡೆಯು ನೌಕರರಲ್ಲಿ ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಸರ್ಕಾರಿ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಕೆಲಸಗಳನ್ನು ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ಮಾಡಬೇಕು. ಆಗಮಾತ್ರ ಸರ್ಕಾರಿ ಸೇವೆ ಸಾರ್ಥಕವಾಗಲಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಮಾತನಾಡಿ, ನಮ್ಮ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಕ್ರೀಡಾಕೂಟ ಸಹಕಾರಿಯಾಗಿದೆ. ವೃತ್ತಿಜೀವನದಲ್ಲಿ ಎದುರಾಗುವ ಒತ್ತಡ ಸನ್ನಿವೇಶಗಳನ್ನು ಸಮರ್ಪಕವಾಗಿ ನಿಭಾಯಿಸಲು ನೌಕರರು ಮುಂದಾಗಬೇಕು. ಕ್ರೀಡಾಕೂಟದಿಂದ ನೌಕರರಲ್ಲಿ ಬಾಂಧವ್ಯ, ಹೊಂದಾಣಿಕೆ ಹೆಚ್ಚಾಗಲಿದೆ. ನೌಕರರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಹೊಂದಬೇಕು ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು.
ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ. ರಮೇಶ್, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ್, ಜಿಲ್ಲಾ ಶಾಖೆಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಸ್. ಮಹದೇವಸ್ವಾಮಿ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಎಚ್.ಎಸ್. ಪ್ರಸಾದ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಜೋಸೆಫ್ ಅಲೆಗ್ಸಾಂಡರ್, ಯಳಂದೂರು ತಾಲೂಕು ಅಧ್ಯಕ್ಷ ವೈ.ಎಂ. ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.