ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಾಹಿತ್ಯ ಯಾವುದೇ ಜಾತಿಗೆ ಸೀಮಿತವಲ್ಲ. ಸಾಹಿತ್ಯ ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ. ಅಂತಹ ಸಾಹಿತ್ಯವನ್ನು ಸಮಾಜಕ್ಕೆ ನೀಡುವ ಸಾಹಿತಿಗಳನ್ನು ಸಮಾಜವೂ ಅಪ್ಪಿಕೊಳ್ಳಬೇಕು ಎಂದು ನಿವೃತ್ತ ಡಿವೈಎಸ್‌ಪಿ ಬಿ.ಆರ್.ಚೌಕಿಮಠ ಹೇಳಿದರು.ತಾಲ್ಲೂಕಿನ ಮಖಣಾಪುರ ತಾಂಡಾದ ಗೋನಾಸಾದ ದೇವಸ್ಥಾನದ ಆವರಣದಲ್ಲಿ ಎಸ್‌ಎಸ್‌ಜಿಸಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಗಣಪತಿ ಚವ್ಹಾಣ ಪುಸ್ತಕ ಬಿಡುಗಡೆ, ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಗುರುವಂದನಾ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ವ್ಯಕ್ತಿಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸ ಮಾಡುತ್ತದೆ. ಸಾಹಿತಿ ಗಣಪತಿ ಚವ್ಹಾಣ ಅವರ ಕೃತಿಗಳು ವಿದ್ಯಾರ್ಥಿ ಸಮುದಾಯಕ್ಕೆ ಮಾರ್ಗದರ್ಶಕವಾಗಿವೆ. ಅವರ ಜ್ಞಾನಧಾರೆ ಹಾಗೂ ಕನ್ನಡ ವ್ಯಾಕರಣ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮಾತನಾಡಿ, ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ. ನಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಇರುವುದು ಶಿಕ್ಷಣದಲ್ಲೇ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ತುಳಸಿಗಿರೀಶ್ ಫೌಂಡೇಶನ್ ಅಧ್ಯಕ್ಷ ಡಾ.ಬಾಬುರಾಜೇಂದ್ರ ನಾಯಿಕ ಮಾತನಾಡಿ, ಅಂಬೇಡ್ಕರ್ ಅವರ ಸೂತ್ರಗಳಾದ ಶಿಕ್ಷಣ, ಹೋರಾಟ, ಸಂಘಟನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಬಂಜಾರಾ ಸಮಾಜ ಶಿಕ್ಷಿತರಾಗಿದ್ದಾರೆ ಆದರೇ ಸಂಘಟಿತರಾಗಿಲ್ಲ. ಸಂಘಟಿತರಾಗದಿದ್ದಲ್ಲಿ ಹೋರಾಟ ಕನಸಿನ ಮಾತು. ಆಗ ನಮ್ಮ ಹಕ್ಕುಗಳನ್ನು ಮತ್ತೊಬ್ಬರು ಕಸಿದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಸಮಾಜ ಸಂಘಟಿತರಾಗಬೇಕು, ಆಗ ಮಾತ್ರ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಎಚ್ಚರಿಸಿದರು.ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಮಕ್ಕಳ ಭವಿಷ್ಯ ರೂಪುಗೊಳ್ಳಲು ಹಾಗೂ ದೊಡ್ಡಮಟ್ಟದ ಯಶಸ್ಸನ್ನು ಸಾಧಿಸಲು ಶಿಕ್ಷಣವೊಂದೇ ಏಕೈಕ ಮಾರ್ಗ. ಶಿಕ್ಷಣವಿದ್ದರೆ ಮಕ್ಕಳು ಗೆಲುವು ಸಾಧಿಸುವುದು ನಿಶ್ಚಿತ. ಹೀಗಾಗಿ ಪೋಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವಂತೆ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಕೆಸರಟ್ಟಿಯ ಶಂಕರಲಿಂಗ ಗುರಪೀಠದ ಸೋಮಲಿಂಗ ಸ್ವಾಮೀಜಿ, ಗೋನಾಸಾದ ದೇವಸ್ಥಾನದ ವಾಲು ನಾಮದೇವ ಪೂಜಾರಿ, ಸಾಹಿತಿ ಗಣಪತಿ ಚವ್ಹಾಣ, ನಿವೃತ್ತ ಶಿಕ್ಷಕರಾದ ಪಿ.ಕೆ.ಬೋಗಾರ, ಬಿ.ಎಂ.ಡೊಳ್ಳಿ, ಬಾಪೂಜಿ ಲಮಾಣಿ, ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ರಾಜು ಚವ್ಹಾಣ, ಶಿಕ್ಷಕ ಶ್ರೀಕಾಂತ ಧಾರೆಕರ ಸೇರಿದಂತೆ ಸಾಹಿತಿಗಳು, ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.