ಸಾರಾಂಶ
ಹರಿಹರದ ಕೆ.ಆರ್.ನಗರದಲ್ಲಿ ಈ ಹಿಂದೆ ನಡೆದ ಕಾಮಗಾರಿಗಳನ್ನು ಬುಧವಾರ ಲೋಕಾಯುಕ್ತ ಎಂಜಿನಿಯರ್ ಅನುಷಾ ಪರಿಶೀಲನೆ ನಡೆಸಿದರು. ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ ಹಾಗೂ ದೂರುದಾರರಿದ್ದರು.
ಕನ್ನಡಪ್ರಭ ವಾರ್ತೆ ಹರಿಹರ
ಕಾಮಗಾರಿ ನಡೆಸದೆ ಬಿಲ್ ಪಡೆಯಲಾಗಿದೆ ಎಂದು ದೂರು ನೀಡಿದ್ದ ಮೇರೆಗೆ ಬೆಂಗಳೂರಿನ ಲೋಕಾಯುಕ್ತ ಇಲಾಖೆಯ ಸಿವಿಲ್ ಎಂಜಿನಿಯರ್ ಅನುಷಾ ಮತ್ತು ಸಿಬ್ಬಂದಿ ಬುಧವಾರ ನಗರದ ಕೆ.ಆರ್.ನಗರದಲ್ಲಿ ಪರಿಶೀಲನೆ ನಡೆಸಿದರು.ನಗರಸಭೆ ಕಚೇರಿಗೆ ಭೇಟಿ ನೀಡಿದ ಅನುಷಾ ಅವರು ದಾಖಲಾಗಿರುವ ದೂರಿನ ಸಂಬಂಧಿತ ಕಡತಗಳನ್ನು ಪಡೆದ ಅವರು, ಕೆ.ಆರ್.ನಗರದ ವಿದ್ಯಾದಾಯಿನಿ ಶಾಲೆ ಸುತ್ತಲಿನ ಕಿರು ನೀರು ಸರಬರಾಜು ಕೇಂದ್ರಗಳನ್ನು ಪರಿಶೀಲಿಸಿದರು.
ಆರೋಪ ಹೊತ್ತವರ ಪೈಕಿ ನಗರಸಭೆಯ ಹಿಂದಿನ ಪೌರಾಯುಕ್ತೆ ಎಸ್.ಲಕ್ಷ್ಮಿ ಅವರು ಸ್ಥಳಕ್ಕೆ ಆಗಮಿಸಿ ಸದ್ಯಕ್ಕೆ ಪರಿಶೀಲನಾ ಸಮಯದಲ್ಲಿ ಹಾಜರಿರಲು ಆಗುತ್ತಿಲ್ಲ ಎಂಬ ಪತ್ರವನ್ನು ನೀಡಿದ್ದಾರೆ. ಈ ಹಿಂದೆ ಇಲ್ಲಿ ಎಇಇ, ಎಇಯಾಗಿ ಸೇವೆ ಸಲ್ಲಿಸಿದ ಆರೋಪಿತರು ಸ್ಥಳ ಪರಿಶೀಲನಾ ಸಮಯದಲ್ಲಿ ಬರುತ್ತೇವೆ ಎಂದು ಬರದೆ ಗೈರು ಹಾಜರಾಗಿದ್ದಾರೆ. ಎರಡು ದಿನಗಳ ಕಾಲ ಪರಿಶೀಲನಾ ಕಾರ್ಯ ಮುಂದುವರೆಯಲಿದ್ದು, ಆರೋಪಿತರು ಆಗಮಿಸದಿದ್ದಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಅನುಷಾ ಹೇಳಿದರು.ಈ ವೇಳೆ ದೂರುದಾರರಾದ ಗುತ್ತಿಗೆದಾರ ಮಜಹರ್ ಸಾಬ್, ಮಧುಸೂಧನ ಮೂಡಿ, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ, ಎಂಜಿನಿಯರ್ ಪ್ರಕಾಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಪಿ.ಜೆ. ಮಹಾಂತೇಶ್ ಇದ್ದರು.