ನಾಳೆಯಿಂದ ಲೋಕಸಭೆ ನಾಮಪತ್ರ ಸ್ವೀಕಾರ

| Published : Apr 11 2024, 12:49 AM IST

ನಾಳೆಯಿಂದ ಲೋಕಸಭೆ ನಾಮಪತ್ರ ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ನಾಮಪತ್ರಗಳನ್ನು ಸ್ವೀಕರಿಸಲು ಏ.12 ರಿಂದ 19ರವರೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆದ ಟಿ.ಭೂಬಾಲನ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ನಾಮಪತ್ರಗಳನ್ನು ಸ್ವೀಕರಿಸಲು ಏ.12 ರಿಂದ 19ರವರೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆದ ಟಿ.ಭೂಬಾಲನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಲೋಕಸಭಾ ಚುನಾವಣೆ ಅಧಿಸೂಚನೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಮಪತ್ರಗಳನ್ನು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3ರವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸಲು ಏ.19 ಕೊನೆ ದಿನವಾಗಿದೆ. 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏ.22ರವರೆಗೆ ಕಾಲಾವಕಾಶವಿದೆ. ಮೇ 7 ರಂದು ಮತದಾನ ನಡೆಯಲಿದ್ದು, ಜು 4 ರಂದು ಮತ ಎಣಿಕೆ ನಡೆಯಲಿದೆ. ಜು.6ರಂದು ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಏ.10ರ ಅಂತ್ಯಕ್ಕೆ 19,43,566 ಮತದಾರರಿದ್ದು 9,86,778 ಪುರುಷ ಹಾಗೂ 9,56,578 ಮಹಿಳಾ ಮತ್ತು 210 ಇತರೆ ಮತದಾರರಿದ್ದಾರೆ. ಈ ಪೈಕಿ 43,468 ಯುವ ಮತದಾರರು, 21,764 ವೀಕಲಚೇತನ, 1,874 ಸೇವಾ ಮತದಾರರು ಇದ್ದಾರೆ ಎಂದರು. ಸುಗಮ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣಾ ಜರಗಿಸುವ ದೃಷ್ಟಿಯಿಂದ ವಿಧಾನಸಭಾ ಮತಕ್ಷೇತ್ರವಾರು ಒಟ್ಟು 167 ಸೆಕ್ಟರ್ ಅಧಿಕಾರಿಗಳು, 72 ಪ್ಲಾಯಿಂಗ್ ಸ್ಕ್ವಾಡ್, 87 ಸ್ಟೆಟಿಕ್ ಸರ್ವಲೈನಸ್ ಟೀಮ್, 24 ವಿಡಿಯೋ ಸರ್ವೆಲೆನ್ಸ್ ಟೀಮ್, 8 ವಿಡಿಯೋ ವಿವಿಂಗ್ ಟೀಮ್, 8 ಅಕೌಂಟಿಂಗ್ ಟೀಮ್ ರಚನೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ಸಿವಿಜಿಲ್ ತಂತ್ರಾಂಶದಲ್ಲಿ 3,929 ದೂರುಗಳು ದಾಖಲಾಗಿವೆ. ಬಂದಂತಹ ದೂರುಗಳನ್ನು ಸಮರ್ಪಕವಾಗಿ ಬಗೆಹರಿಸಲಾಗಿರುತ್ತದೆ. ರಾಜ್ಯದಲ್ಲಿ ವಿಜಯಪುರ ಜಿಲ್ಲೆ ದೂರುಗಳ ನಿವಾರಣೆ ಮಾಡುವಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಮುಕ್ತ, ಶಾಂತಿಯುತ ಹಾಗೂ ಸಮರ್ಪಕವಾಗಿ ಚುನಾವಣೆ ನಡೆಸಲು ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಮೊದಲನೇ ಹಂತದ ತರಬೇತಿಯನ್ನು ನೀಡಲಾಗಿದೆ. ಬರುವ ದಿನಗಳಲ್ಲಿ ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುವುದು. ಈಗಾಗಲೇ ಚುನಾವಣೆ ವೀಕ್ಷಕರು ನೀಯೋಜನೆಗೊಂಡಿರುತ್ತಾರೆ. ಜಿಲ್ಲೆಯಲ್ಲಿ ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವ 2,900 ಶಸ್ತ್ರಾಸ್ತ್ರಗಳಿದ್ದು, ಈ ಪೈಕಿ ಕೇವಲ 45 ಶಸ್ತ್ರಾಸ್ತ್ರಗಳಿಗೆ ಜೀವಬೆದರಿಕೆ ಇರುವ ವ್ಯಕ್ತಿ ಹಾಗೂ ಬ್ಯಾಂಕ್‌ನ ಭದ್ರತಾ ದೃಷ್ಟಿಯಿಂದ ವಿನಾಯತಿ ನೀಡಲಾಗಿದೆ, ಇನ್ನೂ 7 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ ಎಂದು ಎಂದು ತಿಳಿಸಿದರು. ಅವಹೇಳನಕಾರಿ ಪ್ರಚೋದನೆ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.

---------------

ಬಾಕ್ಸ್‌

ಇಲ್ಲಿಯವರೆಗೆ ₹3.24 ಕೋಟಿ ಹಣ ವಶ

ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಮುಂಜಾಗ್ರತವಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗಿದೆ. ಇಲ್ಲಿಯವರೆಗೆ ₹3.24 ಕೋಟಿ ದಾಖಲೆ ಇಲ್ಲದ ಹಣವನ್ನು ವಶಕ್ಕೆ ಪಡೆಯಲಾಗಿದೆ. 3,707 ಲೀಟರ್ ಮದ್ಯ, 624 ಗ್ರಾಂ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಹಣ ಸೇರಿದಂತೆ ವಶಪಡಿಸಿಕೊಳ್ಳಲಾದ ಮಧ್ಯ, ಡ್ರಗ್ಸ್ ನ ಒಟ್ಟು ಮೌಲ್ಯ 3 ಕೋಟಿ 39 ಲಕ್ಷವಾಗುತ್ತದೆ ಎಂದು ಡಿಸಿ ಮಾಹಿತಿ ನೀಡಿದರು.