ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕು ಸ್ವೀಪ್ ಸಮಿತಿ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿಆವರಣದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜಾಥಾ ಕಾರ್ಯಕ್ರಮಕ್ಕೆ ಶಾಸಕ, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಅವರು ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಎಸ್‌ಐಆರ್ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ತಾಲೂಕಿನಲ್ಲಿ ನಡೆಯುತ್ತಿದ್ದು ಎಲ್ಲ ಮತದಾರರು ಕಡ್ಡಾಯವಾಗಿ ನಿಮ್ಮ ಮತದಾನ ಪಟ್ಟಿಯಲ್ಲಿ ಪರಿಷ್ಕರಣೆ ಮಾಡಿಸಬೇಕು. ಇದರಿಂದ ಸರ್ಕಾರದ ಸೌಲಭ್ಯ ಹಾಗೂ ಮತದಾನದ ಹಕ್ಕು ಪಡೆಯಲು ಹೆಚ್ಚು ಅನುಕೂಲವಾಗಲಿದೆ. ಬಿಎಲ್‌ಒಗಳು ಮನೆಮನೆಗೆ ಅಗಮಿಸಲಿದ್ದು ಪ್ರತಿಯೊಬ್ಬರು ಹೆಚ್ಚಿನ ಸಮಯವನ್ನು ನೀಡಿ ನಮೂನೆ ಕಾಲಂ ಸರಿಯಾಗಿ ಭರ್ತಿ ಮಾಡಿ. ಅವರು ಕೇಳಿದ ಮಾಹಿತಿ ಹಾಗೂ ಸೂಕ್ತ ದಾಖಲಾತಿಗಳು ನೀಡಿ ಪರಿಶೀಲನೆ ನಡೆಸಲು ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಮತದಾರರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಎನ್‌ಆರ್‌ಎಲ್‌ಎಂ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.ತಾಲೂಕು ಪಂಚಾಯಿತಿ ಆವರಣದಿಂದ ಹೊರಟು ಅಂಬೇಡ್ಕರ್ ವೃತ್ತ, ಹಾಗೂ ಬಳ್ಳಾರಿ ರಸ್ತೆ ಮಾರ್ಗವಾಗಿ ತೆರಳಿ ಶ್ರೀ ಶನಿಮಹಾತ್ಮದೇವಸ್ಥಾನದ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಘೋಷಣೆಯೊಂದಿಗೆ ಅರಿವು ಮೂಡಿಸಲಾಯಿತು. ಇದೇ ವೇಳೆ ಅಂಗವಿಲಕರ ಕಲ್ಯಾಣ ಯೋಜನೆ ಅಡಿಯಲ್ಲಿ ಅನೇಕ ಮಂದಿ ತಾಲೂಕಿನ ವಿಕಲಚೇತನರಿಗೆ ಲ್ಯಾಪ್‌ಟಾಪ್ ಹಾಗೂ ಇತರೆ ಪರಿಕರ ಸಾಮಗ್ರಿಗಳನ್ನು ವಿತರಿಸಿ ಶುಭಹಾರೈಸಿದರು.ಈ ವೇಳೆ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ನಾರಾಯಣಸ್ವಾಮಿ, ತಾಲೂಕು ದಂಡಾಧಿಕಾರಿ ರವಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್, ತಾಪಂ ಪಂಚಾಯಿತಿ ಸಹಾಯಕ ನಿರ್ದೇಶಕ ಮಾರುತಿ ಪ್ರಸಾದ್ ಅಧಿಕಾರಿಗಳು ಹಾಗೂ ಸಿಬ್ಬಂದಿ. ತಾಲೂಕು ಮಟ್ಟದ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಸೇರಿದಂತೆ ಎನ್‌ಆರ್‌ಎಲ್‌ಎಂನ ವೀರಣ್ಣ, ಅರ್ಪಿತ,ನಿಹಾರಿಕ, ಸರಿತಾ ಶಿವಣ್ಣ, ರಮೇಶ್ ಬಾಬು, ಪ್ರೇಮಾ, ಸಂಜೀವಿನಿ ಸಂಘದ ಎಂಬಿಕೆ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.