ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದ ಜೋಡಿ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಹೋಗಿದ್ದ ವೇಳೆ ಯುವತಿ ಸಂಬಂಧಿಗಳು ಹರಿತ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಯುವಕನ ಕೈಗೆ ಗಂಭೀರ ರಕ್ತಗಾಯವಾದ ಘಟನೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಸಂಜೆ ನಡೆದಿದೆ.
- ಎದೆಗೆ ಚುಚ್ಚಲು ಬಂದಾಗ ಬಲಗೈ ಅಡ್ಡಪಡಿಸಿದ್ದರಿಂದ ಗಂಭೀರ ಗಾಯ । ಯುವಕ ಸಿದ್ದೇಶ ದಾವಣಗೆರೆ ಆಸ್ಪತ್ರೆಗೆ ದಾಖಲು
- - -- ಸೋದರ ಮಾವ, ಅಣ್ಣ ಇತರರ ಮೇಲೆ ಯುವತಿ ತೀವ್ರ ಆಕ್ರೋಶ
- ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಹೋಗಿದ್ದಾಗ ಘಟನೆ- ಬಸವಾಪಟ್ಟಣ ಠಾಣೆ ವ್ಯಾಪ್ತಿ ದಾಗಿನಕಟ್ಟೆ ಲೀಲಾವತಿ, ಸಿದ್ದೇಶ
- ಇಬ್ಬರ ಮಧ್ಯೆ 4 ವರ್ಷದಿಂದ ಪ್ರೀತಿ, ಜೂ.1ರಂದು ನಡೆದಿದ್ದ ಮದುವೆ- ಘಟನೆ ಗಮನಿಸಿ ಸ್ಥಳಕ್ಕೆ ದೌಡಾಯಿಸಿ ಆರೋಪಿ ನಾಗರಾಜನನ್ನು ವಶಕ್ಕೆ ಪಡೆ ಪೊಲೀಸರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದ ಜೋಡಿ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಹೋಗಿದ್ದ ವೇಳೆ ಯುವತಿ ಸಂಬಂಧಿಗಳು ಹರಿತ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಯುವಕನ ಕೈಗೆ ಗಂಭೀರ ರಕ್ತಗಾಯವಾದ ಘಟನೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಸಂಜೆ ನಡೆದಿದೆ.ಚನ್ನಗಿರಿ ತಾ. ಕೆಂಚುಗಾರನಹಳ್ಳಿ ವಾಸಿ, ಹಾಲಿ ಮೈಸೂರಿನ ಫಾರಂ ಹೌಸ್‌ವೊಂದರಲ್ಲಿ ಕೆಲಸಕ್ಕಿರುವ ಕೆಂಚುಗಾರನಹಳ್ಳಿ ಸಿದ್ದೇಶ ಹಲ್ಲೆಗೊಳಗಾದ ವ್ಯಕ್ತಿ. ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಗಿನಕಟ್ಟೆ ಗ್ರಾಮದ ಲೀಲಾವತಿ (18) ಅವರನ್ನು ಸಿದ್ದೇಶ 4 ವರ್ಷದಿಂದ ಪ್ರೀತಿಸಿ, ಜೂ.1ರಂದು ಇಬ್ಬರು ಮದುವೆಯಾಗಿದ್ದರು ಎನ್ನಲಾಗಿದೆ.
ಕಂಚುಗಾರನಹಳ್ಳಿ ಗ್ರಾಮದ ಅಜ್ಜಿ ಮನೆಯಲ್ಲಿ ಲೀಲಾವತಿ ವಾಸವಿದ್ದು, ಅಲ್ಲಿಯೇ ಆಕೆಗೆ ಸಿದ್ದೇಶ ಜೊತೆಗೆ ಪ್ರೇಮಾಂಕುರವಾಗಿದೆ. ಇಬ್ಬರ ಪ್ರೀತಿಗೆ ಲೀಲಾವತಿ ಮನೆಯವರು ಒಪ್ಪಿರಲಿಲ್ಲ. ಜೂ.30ರಂದು ಲೀಲಾವತಿ, ಸಿದ್ದೇಶ್ ಊರಿನಿಂದ ತೆರಳಿದ್ದರು. ಅದೇ ದಿನ ಯುವತಿ ಕಡೆಯವರು ಲೀಲಾವತಿ ನಾಪತ್ತೆಯಾದ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು.ಜೂ.1ರಂದು ಮದುವೆಯಾದ ಲೀಲಾವತಿ, ಸಿದ್ದೇಶ ಮಾರನೆಯ ದಿನವೇ ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ, ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮನವಿ ಮಾಡಿದ್ದರು. ತಮಗೆ ಜೀವಭಯವಿದ್ದು, ರಕ್ಷಣೆ ನೀಡುವಂತೆ ನವಜೋಡಿ ಎಸ್ಪಿಗೆ ಮನವಿ ಮಾಡಿದ್ದರು. ಈ ಬಗ್ಗೆ ಬಸವಾಪಟ್ಟಣ ಠಾಣೆಗೆ ದೂರು ನೀಡುವಂತೆ ಎಸ್‌ಪಿ ಸೂಚಿಸಿದ್ದರು. ಎಸ್‌ಪಿ ಅವರ ಸೂಚನೆಯಂತೆ ವಕೀಲರ ಸಮೇತ ನವದಂಪತಿ ಠಾಣೆಗೆ ದೂರು ನೀಡಲು ಹೋಗಿದ್ದರು.
ವಿಷಯ ತಿಳಿದ ಲೀಲಾವತಿ ಸೋದರ ಮಾವ ನಾಗರಾಜ, ಆಕೆಯ ಸಹೋದರ ಕುಟುಂಬದವರು ಬಸವಾಪಟ್ಟಣ ಪೊಲೀಸ್ ಠಾಣೆ ಬಳಿ ಬಂದಿದ್ದಾರೆ. ಠಾಣೆ ಆವರಣದಲ್ಲೇ ಸಿದ್ದೇಶನ ಎದೆಗೆ ನಾಗರಾಜ ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ. ಏನಾದರೂ ಅಪಾಯ ಆಗಬಹುದೆಂಬುದನ್ನು ಗ್ರಹಿಸಿದ್ದ ಸಿದ್ದೇಶನು ಚಾಕುವಿನಿಂದ ಎದೆಗೆ ತಿವಿಯಲು ಬಂದಾಗ ಕೈಯನ್ನು ಅಡ್ಡ ಮಾಡಿದ್ದರಿಂತ ಸಿದ್ದೇಶನ ಬಲ ಕೈ ತುಂಡಾಗಿದ್ದು, ಸಿದ್ದೇಶನ ರಕ್ಷಣೆಗೆ ಬಂದ ಲೀಲಾವತಿ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ.ತಕ್ಷಣವೇ ಘಟನೆಯನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಆರೋಪಿ ನಾಗರಾಜನನ್ನು ವಶಕ್ಕೆ ಪಡೆದು, ಮುಂದಾಗಲಿದ್ದ ಅಪಾಯವನ್ನು ತಪ್ಪಿಸಿದರು. ಘಟನೆಯಿಂದ ತೀವ್ರ ಆಕ್ರೋಶಗೊಂಡ ಲೀಲಾವತಿ ತನಗೆ, ತನ್ನ ಪತಿಗೆ ಪೊಲೀಸರು ಸೂಕ್ತ ರಕ್ಷಣೆ, ಭದ್ರತೆ ನೀಡಬೇಕು. ತನ್ನ ಪತಿ ಹಾಗೂ ತನ್ನ ಕೊಲೆಗೆ ಯತ್ನಿಸಿದ ಸೋದರ ಮಾವ ನಾಗರಾಜ ಹಾಗೂ ತನ್ನ ಅಣ್ಣ ಮಂಜುನಾಥನ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ. - - -
(ಬಾಕ್ಸ್) * ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಸಿದ್ದೇಶ್ ದಾಖಲು ಚಾಕುವಿನಿಂದ ಗಂಭೀರ ದಾಳಿಗೊಳಗಾದ ಸಿದ್ದೇಶನನ್ನು ತಕ್ಷಣವೇ ದಾವಣಗೆರೆ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಆಸ್ಪತ್ರೆಯ ವೈದ್ಯರು ಗಾಯಾಳು ಸಿದ್ದೇಶ್‌ಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸಿದ್ದೇಶನ ಮೇಲೆ ಹರಿತವಾದ ಚಾಕುವಿನಿಂದ ದಾಳಿ ಮಾಡಿದ ನಾಗರಾಜ ಹಾಗೂ ಲೀಲಾವತಿ ಕಡೆಯವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂದೆ ಆಗಬಹುದಾದ ಅಪಾಯ, ಅನಾಹುತವನ್ನು ಗ್ರಹಿಸಿದ್ದ ಲೀಲಾವತಿ, ಸಿದ್ದೇಶ ದಂಪತಿ ಮುನ್ನೆಚ್ಚರಿಕೆಯಾಗಿ ಎಸ್‌ಪಿ ಮೊರೆಹೋಗಿದ್ದರು. ಅಲ್ಲಿಂದ ಬಂದ ಮಾರನೆಯ ದಿನವಾದ ಭಾನುವಾರ ಸಂಜೆ ಬಸವಾಪಟ್ಟಣ ಠಾಣೆಗೆ ಬಂದಾಗ ಸಿದ್ದೇಶನ ಮೇಲೆ ಮಾರಕ ದಾಳಿಯಾಗಿದ್ದು ಲೀಲಾವತಿಗೆ ಮತ್ತಷ್ಟು ಆತಂಕ ತಂದಿಟ್ಟಿದೆ.- - -
ಚಾಕು ದಾಳಿ, ಆರೋಪಿ ಬಂಧನ: ಎಸ್ಪಿ ಶೇಖರ್ದಾವಣಗೆರೆ: ಬಸವಾಪಟ್ಟಣದ ಠಾಣೆಯಲ್ಲಿ ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಮಾರಣಾಂತಿಕ ದಾಳಿ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೀತಿಸಿ ವಿವಾಹವಾಗಿದ್ದಕ್ಕೆ ಯುವಕ- ಯುವತಿ ಬಗ್ಗೆ ಯುವತಿ ಕುಟುಂಬಸ್ಥರ ವಿರೋಧವಿತ್ತು. ಪ್ರೀತಿಸಿ ಮದುವೆಯಾಗಿದ್ದ ಯುವಕ-ಯುವತಿಯಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದ ವೇಳೆ ಚಾಕುವಿನಿಂದ ದಾಳಿ ಮಾಡಲಾಗಿದೆ ಎಂದರು. ಚಾಕುವಿನಿಂದ ದಾಳಿಗೊಳಗಾದ ಯುವಕನನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚನ್ನಗಿರಿ ತಾ. ಕಂಚುಗಾರನಹಳ್ಳಿ ಗ್ರಾಮದಲ್ಲಿ ಭದ್ರತೆಗಾಗಿ ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ದಾಳಿ ಮಾಡಿದವರ ಮೇಲೆ ದೂರು ನೀಡದಂತೆ ಕೆಲ ಪೊಲೀಸ್ ಸಿಬ್ಬಂದಿ ಒತ್ತಡ ಹೇರಿದ್ದಾರೆಂಬ ಆರೋಪವಿದೆ. ಈ ಬಗ್ಗೆ ಚನ್ನಗಿರಿ ಡಿವೈಎಸ್ಪಿಗೆ ತನಿಖೆ ನಡೆಸುವಂತೆ ಸೂಚನೆ ನೀಡುತ್ತೇವೆ ಎಂದು ಎಸ್ಪಿ ಡಾ.ಶೇಖರ್ ತಿಳಿಸಿದರು.- - - (ಡಾ.ಶೇಖರ್, ಎಸ್‌ಪಿ)-(ಫೋಟೋಗಳಿವೆ):
