ಸಾರಾಂಶ
ಕೊಪ್ಪಳ:
ತಾಲೂಕಿನ ಅಲ್ಲಾನಗರದಲ್ಲಿರುವ ಮೆ. ಕಾಮಿನಿ ಐರನ್ ಮತ್ತು ಸ್ಟೀಲ್ ಎಲ್.ಎಲ್.ಪಿ ಕಾರ್ಖಾನೆಯಲ್ಲಿ ನಡೆದ ಅಪಘಾತದ ಹಿನ್ನೆಲೆ ಇಲಾಖೆಯ ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆ ಮತ್ತು ಬಾಯ್ಲರಗಳನ್ನು ಪರಿಶೀಲಿಸಿದರು.ಕಾರ್ಖಾನೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಮಯದಲ್ಲಿ ಕಾರ್ಬನ್ ಮೊನಾಕ್ಸೈಡ್ ಗ್ಯಾಸ್‌ನಿಂದ ಒಬ್ಬ ಕಾರ್ಮಿಕ ಮೃತನಾಗಿದ್ದು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ ಉಳಿದ 9 ಜನರು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದು, ವೈದ್ಯರ ಸಲಹೆ ಮೇರೆಗೆ ಅವರನ್ನು 24 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ ಎಂದು ಕಾರ್ಖಾನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ದಿನವೇ ಕಾರ್ಖಾನೆ ಮತ್ತು ಬಾಯ್ಲರಗಳ ಇಲಾಖೆಯ ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ಮತ್ತು ತನಿಖೆ ಮಾಡಿ ಕ್ರಮ ತೆಗೆದುಕೊಂಡಿರುತ್ತಾರೆ. ಕಾರ್ಖಾನೆಯಲ್ಲಿನ ಸುರಕ್ಷತೆಯ ಕುರಿತು ಕ್ರಮ ತೆಗೆದುಕೊಳ್ಳಲು ಮತ್ತು ಮುಂದಿನ ದಿನಗಳಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಲು ಕ್ರಮ ಮತ್ತು ಸುರಕ್ಷತಾ ಆಡಿಟ್ ಮಾಡಿಸಿ ಕೊಪ್ಪಳ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿಗೆ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಅಲ್ಲಿಯವರೆಗೂ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಲು ನಿಷೇಧಾಜ್ಞೆ ಆದೇಶ ಜಾರಿ ಮಾಡಲಾಗಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಮತ್ತು ಕೊಪ್ಪಳ ಜಿಲ್ಲಾ ಉಸುವಾರಿ ಸಚಿವ ಶಿವರಾಜ ತಂಗಡಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿ, ಸುರಕ್ಷತಾ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ ಮತ್ತು ಮೃತ ಕಾರ್ಮಿಕರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ದೊರಕಿಸಲು ಕಾರ್ಮಿಕ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಕಾರ್ಖಾನೆಗಳು, ಬಾಯ್ಲರಗಳು, ಸುರಕ್ಷತಾ ಮತ್ತು ಸ್ವಾಸ್ಥ್ಯ ಇಲಾಖೆಯ ಹುಬ್ಬಳ್ಳಿ ವಲಯದ ಕಾರ್ಖಾನೆಗಳ ಜಂಟಿ ನಿರ್ದೇಶಕ ರವೀಂದ್ರನಾಥ ಎನ್. ರಾಠೋಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಐವರ ವಿರುದ್ಧ ಪ್ರಕರಣ ದಾಖಲುಕೊಪ್ಪಳ:ತಾಲೂಕಿನ ಅಲ್ಲಾನಗರ ಗ್ರಾಮದ ಹತ್ತಿರವಿರುವ ಹೊಸಪೇಟೆ ಇಸ್ಪಾತ್ ಕಾರ್ಖಾನೆಯಲ್ಲಿ ಮಂಗಳವಾರ ಅನಿಲ ಸೊರಿಕೆಯಿಂದ ಉಂಟಾದ ಅವಘಡಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಕಾರ್ಮಿಕ ಅಲ್ಲಾನಗರ ನಿವಾಸಿಯಾದ ಮಾರುತಿ (24) ಮೃತಪಟ್ಟಿದ್ದ. ಇನ್ನೊಬ್ಬ ಕಾರ್ಮಿಕ ಮಹಾಂತೇಶನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇನ್ನುಳಿದ 9 ಜನ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗಿದೆ.ಈ ದುರಂತಕ್ಕೆ ಕಾರಣವಾದ ಹಿನ್ನೆಲೆ ಕಂಪನಿಯ ಸೈಟ್ ಮ್ಯಾನೇಜರ್, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಆಪರೇಷನ್ ಮತ್ತು ಮೆಂಟೆನೆನ್ಸ್ ಆರ್.ಜೆ.ಎಚ್. ಮಾಲೀಕರು, ಕಾಮಿನಿ ಐರನ್ ಮತ್ತು ಸ್ಟೀಲ್ ಎಲ್‌ಎಲ್‌ಪಿ ಮಾಲೀಕರು, ಹೊಸಪೇಟೆ ಇಸ್ಪಾತ್ ಕಂಪನಿಯ ಮಾಲೀಕರ ಮೇಲೆ ಮೃತಕಾರ್ಮಿಕನ ಕುಟುಂಬಸ್ಥ ವೀರೇಶ ಕೊರಗಲ್ ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ.ಕೆಲಸಗಾರರಿಗೆ ಸುರಕ್ಷತೆ ಇಲ್ಲದ ಜಾಗದಲ್ಲಿ ಮತ್ತು ಯಾವುದೇ ಮೂಲಭೂತ ಸುರಕ್ಷತಾ ಉಪಕರಣ ಒದಗಿಸದೆ ಹಾಗೂ ಮುಂಜಾಗ್ರತಾ ಕ್ರಮ ವಹಿಸದೆ, ಕೆಲಸಕ್ಕೆ ಹಚ್ಚಿದ್ದರಿಂದ ಕೆಲಸ ಮಾಡುತ್ತಿದ್ದ ಮಾರುತಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹೀಗಾಗಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ ಎಂದು ಕುಟುಂಬಸ್ಥರು ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.