ಸಾರಾಂಶ
ಕಾಮಗಾರಿ ಪ್ರದೇಶದಲ್ಲಿ ಅಗತ್ಯ ಬ್ಯಾರಿ ಕೇಡ್‌ಗಳನ್ನು ಅಳವಡಿಸದೆ, ಎಚ್ಚರಿಕೆಯ ಸೂಚನ ಫಲಕಗಳನ್ನು ಹಾಕದೇ ಇದ್ದುದರಿಂದ ಕಾಮಗಾರಿ ನಡೆಯುತ್ತಿರುವುದು ಗೊತ್ತಿಲ್ಲದೇ ಕಾರೊಂದು ವೇಗದಿಂದ ಬಂದು ಬೈಕಿಗೆ ಗುದ್ದಿತ್ತು. ಬೈಕಿನಲ್ಲಿದ್ದ ರಾಹುಲ್ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಹೆಬ್ರಿ
ಶಿವಪುರ ಪ್ರದೇಶದಲ್ಲಿ ರಾ.ಹೆ. 169ಎ ಇದರ ಕಾಮಗಾರಿ ನಡೆಯುತ್ತಿದ್ದು, ಡಿ.4ರಂದು ಆರ್‌ಎಸ್ಎಸ್ ಕಾರ್ಯಕರ್ತ ರಾಹುಲ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದಕ್ಕೆ ಗುತ್ತಿಗೆದಾರರು ನಿರ್ಲಕ್ಷ್ಯದಿಂದ ಸಮರ್ಪಕ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದೇ ಕಾರಣ ಎಂದು ಸ್ಥಳೀಯರು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.ಕಾಮಗಾರಿ ಪ್ರದೇಶದಲ್ಲಿ ಅಗತ್ಯ ಬ್ಯಾರಿ ಕೇಡ್‌ಗಳನ್ನು ಅಳವಡಿಸದೆ, ಎಚ್ಚರಿಕೆಯ ಸೂಚನ ಫಲಕಗಳನ್ನು ಹಾಕದೇ ಇದ್ದುದರಿಂದ ಕಾಮಗಾರಿ ನಡೆಯುತ್ತಿರುವುದು ಗೊತ್ತಿಲ್ಲದೇ ಕಾರೊಂದು ವೇಗದಿಂದ ಬಂದು ಬೈಕಿಗೆ ಗುದ್ದಿತ್ತು. ಬೈಕಿನಲ್ಲಿದ್ದ ರಾಹುಲ್ ಮೃತಪಟ್ಟಿದ್ದಾರೆ. ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸಿರುವುದರಿಂದಲೇ, ಮನೆಗೆ ಆಧಾರವಾಗಿದ್ದ ಯುವಕ ರಾಹುಲ್‌ನನ್ನು ಕಳೆದುಕೊಂಡಿದ್ದೇವೆ. ಗುತ್ತಿಗೆದಾರರು ಆತನ ಮನೆಯವರಿಗೆ 50 ಲಕ್ಷ ರು. ಪರಿಹಾರ ಕೊಡಬೇಕು. ಇಲ್ಲದಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು ಎಂದು ಮೃತರ ಸಂಬಂಧಿ ಶ್ರೀಧರ ಶೆಟ್ಟಿ ಹೇಳಿದರು.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಮಾತನಾಡಿ, ಮನೆಗೆ ಆಧಾರ ಸ್ತಂಭವಾಗಿದ್ದ ಹಿರಿಯ ಮಗನನ್ನು ಕಳೆದುಕೊಂಡ ಬಡ ಕುಟುಂಬ ಕಕ್ಕಾಬಿಕ್ಕಿಯಾಗಿದೆ. ಕಿರಿಯ ಮಗನಿಗಾದರೂ ಉದ್ಯೋಗ ನೀಡಲು ಶಿವಪುರ ಗ್ರಾಪಂ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.ಸ್ಥಳೀಯರಾದ ಶ್ರೀನಿವಾಸ್, ಇಂದಿರಾ, ಬಾಬು ಶೆಟ್ಟಿ, ಗುರು ಬಡಿಕಿಲಾಯ, ಶ್ರೀಧರ ಶೆಟ್ಟಿ, ಶೀನ ಇನ್ನಿತರ ಊರಿನ ಮುಖಂಡರು ಜೊತೆಗಿದ್ದರು.