ಆಂಧ್ರದಲ್ಲಿ ಅಪಘಾತ: ಬಳ್ಳಾರಿಯ ಐದು ಜನರು ಸಾವು

| Published : Mar 05 2024, 01:34 AM IST

ಸಾರಾಂಶ

ಅತಿಯಾದ ವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿದ್ದು, ಮರಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

ಬಳ್ಳಾರಿ: ಆಂಧ್ರಪ್ರದೇಶದ ಮೆಹಬೂಬ್‌ ನಗರ ಜಿಲ್ಲೆಯ ಕೊತಕೋಟ ಬೈಪಾಸ್‌ನ ತೆಕ್ಕಲಯ್ಯ ದರ್ಗಾ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೇವಿನಗರದ ಬಸವನಕುಂಟೆ ಪ್ರದೇಶದ ಐದು ಜನರು ಸಾವಿಗೀಡಾಗಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.ಮೃತರನ್ನು ವಾಸಿಂ (8 ತಿಂಗಳು), ಬುಸ್ರಾ (2), ಮಾರಿಯಾ (13), ಫಾತಿಮಾ (77) ಹಾಗೂ ಅಬ್ದುಲ್ ರಹಮಾನ್ (30) ಎಂದು ಗುರುತಿಸಲಾಗಿದೆ.ದೇವಿನಗರದ ಬಸವನ ಕುಂಟೆ ನಿವಾಸಿಗಳಾದ ಅಬ್ದುಲ್ ರೆಹಮಾನ್ ಅವರ ಕುಟುಂಬ ಸದಸ್ಯರ ಬಳ್ಳಾರಿಯಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಸಾವಿಗೀಡಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮತ್ತೊಬ್ಬರು ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವವರನ್ನು ಮೆಹಬೂಬ್ ನಗರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಾದ ಶಫಿ, ಅಸ್ಸಾನ್, ಖಾದೀರ್, ಅಲಿ, ಅಬೀಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಸ್ಥಿತಿ ಗಂಭೀರವಾಗಿ ಎಂದು ತಿಳಿದುಬಂದಿದೆ.ಖಾದೀರ್ ಎಂಬಾತನಿಗೆ ಹೈದ್ರಾಬಾದ್‌ನಲ್ಲಿ ಮದುವೆ ನಿಶ್ಚಯವಾಗಿದ್ದು, ರೆಹಮಾನ್ ಅವರ ಕುಟುಂಬದ ಸಂಬಂಧಿಕರು ಹಾಗೂ ಸ್ನೇಹಿತರು ಮದುವೆ ದಿನ ನಿಗದಿಗೊಳಿಸಲು ತೆರಳುತ್ತಿದ್ದರು. ಅತಿಯಾದ ವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿದ್ದು, ಮರಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಸಾವಿಗೀಡಾಗಿದ್ದಾರೆ.