ಪುತ್ತೂರಿನಲ್ಲಿ ಪತ್ರಕರ್ತರಿಗೆ ಅಪಘಾತ ವಿಮೆ

| Published : Sep 07 2024, 01:37 AM IST

ಸಾರಾಂಶ

ನೋಂದಣಿ ಕಾರ್ಯಕ್ರಮ ಕೊನೆಯಲ್ಲಿ ಸಂಘದ ಸದಸ್ಯರಿಗೆ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ಅಂಚೆ ಇಲಾಖೆ ಸಹಯೋಗದಲ್ಲಿ ಗುರುವಾರ ಪುತ್ತೂರು ಪತ್ರಿಕಾ ಭವನದಲ್ಲಿ ಪತ್ರಕರ್ತ ಸದಸ್ಯರ ವೈಯಕ್ತಿಕ ಅಪಘಾತ ವಿಮೆ ನೋಂದಣಿ ಮತ್ತು ಆಧಾರ್ ತಿದ್ದುಪಡಿ ಸೇವೆಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪುತ್ತೂರು ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ನಾಗರಾಜ್,

ಅಂಚೆ ಇಲಾಖೆಯಿಂದ ಹಳ್ಳಿ ಹಳ್ಳಿಗಳಲ್ಲಿ ಜನ ಸಂಪರ್ಕ ಅಭಿಯಾನ ನಡೆಸುವ ಮೂಲಕ ಇಲಾಖೆಯಲ್ಲಿ ನೀಡಲಾಗುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹಿಂದೆ ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಮಾಧ್ಯಮವಾಗಿ ಕೆಲಸ ಮಾಡುತ್ತಿತ್ತು. ಪತ್ರ ವ್ಯವಹಾರ ಕಡಿಮೆಯಾಗುತ್ತಾ ಬಂದಂತೆ ಭಾರತೀಯ ಅಂಚೆ ಇಲಾಖೆ ಹೊಸ ಹೊಸ ಸೇವೆಗಳನ್ನು ಜಾರಿಗೊಳಿಸುತ್ತಾ ಬಂದಿದ್ದು, ಇವತ್ತು ಅನೇಕ ಸೇವೆಗಳು ಅಂಚೆ ಇಲಾಖೆಯಲ್ಲಿ ನಡೆಯುತ್ತಿದೆ. ಇವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಗ್ರಾಮಗಳಲ್ಲಿ ಜನಸಂಪರ್ಕ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇನ್ನೋರ್ವ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ ಎಂ. ಮಾತನಾಡಿ ಅಂಚೆ ಇಲಾಖೆ ಮೂಲಕ ವೈಯಕ್ತಿಕ ಅಪಘಾತ ವಿಮೆ ಯೋಜನೆ ಜಾರಿಯಲ್ಲಿದೆ. ಇದಕ್ಕಾಗಿ ನಾನಾ ವಿಮಾ ಕಂಪನಿಗಳ ಜತೆ ಇಲಾಖೆ ಒಪ್ಪಂದ ಮಾಡಿಕೊಂಡಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸಿದ್ದಿಕ್ ನೀರಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ವಂದಿಸಿದರು.

ಅಂಚೆ ಇಲಾಖೆಯ ಸಿಬ್ಬಂದಿ ಜಗನ್ನಾಥ್, ಅಶ್ವಥ್, ಹಿಲರಿ, ಜನಾರ್ದನ್, ಪದ್ಮಶುಭ ಮತ್ತು ವಿಜಿತ್ ಅವರು ಅಪಘಾತ ವಿಮೆ ಪಾಲಿಸಿ ನೋಂದಣಿ ಮತ್ತು ಆಧಾರ್ ತಿದ್ದುಪಡಿ ಸೇವೆ ನಡೆಸಿಕೊಟ್ಟರು. ಪತ್ರಕರ್ತರ ಸಂಘದ ಸದಸ್ಯರು ಮತ್ತು ಕುಟುಂಬ ಸದಸ್ಯರು ಯೋಜನೆಯ ಪ್ರಯೋಜನ ಪಡೆದುಕೊಂಡರು. ವಿಮಾ ಪ್ರೀಮಿಯಂ ಮೊತ್ತವನ್ನು ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭರಿಸಲಾಯಿತು. ಸದಸ್ಯರ ಐಪಿಪಿಬಿ ಖಾತೆಯ ಆರಂಭಿಕ ಮೊತ್ತವನ್ನು ಪುತ್ತೂರು ಸಂಘದ ವತಿಯಿಂದ ಭರಿಸಲಾಯಿತು.ಆರೋಗ್ಯ ಕಾರ್ಡ್ ವಿತರಣೆ: ನೋಂದಣಿ ಕಾರ್ಯಕ್ರಮ ಕೊನೆಯಲ್ಲಿ ಸಂಘದ ಸದಸ್ಯರಿಗೆ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ ಸಮಾರಂಭ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಪುಷ್ಪರಾಜ್ ಬಿ.ಎನ್‌, ಭಾಸ್ಕರ ರೈ ಕಟ್ಟ, ಮಂಗಳೂರು ಕೆಎಂಸಿ ಆಸ್ಪತ್ರೆಯ ಕಾರ್ತಿಕ್ ಉಪಸ್ಥಿತರಿದ್ದರು.