ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಮನೆ ಸಂಪೂರ್ಣ ಭಸ್ಮವಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದ ಪುಷ್ಪ ಹಾಗೂ ಮೊಮ್ಮಗ ಹರ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮೀಪದ ಐಗೂರು ಗ್ರಾಪಂ ವ್ಯಾಪ್ತಿಯ ಕಾಜೂರಿನಲ್ಲಿ ಭಾನುವಾರದಂದು ರಾತ್ರಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಮನೆ ಸಂಪೂರ್ಣ ಭಸ್ಮವಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದ ಪುಷ್ಪ ಹಾಗೂ ಮೊಮ್ಮಗ ಹರ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರಾತ್ರಿ 11.40ರ ವೇಳೆಗೆ ಮನೆಯಲ್ಲಿ ಮಲಗಿದ್ದ ಅಜ್ಜಿ ಪುಷ್ಪ ಹಾಗೂ ಮೊಮ್ಮಗ ಹರ್ಷಿತ್ ಗಾಢ ನಿದ್ರೆಯಲ್ಲಿದ್ದಾಗ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚರಗೊಂಡ ಪುಷ್ಪ, ಪಕ್ಕದ ಮನೆಯಲ್ಲಿದ್ದ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಧ್ಯಕ್ಷರು ತಮ್ಮ ಜೀವದ ಹಂಗನ್ನು ತೊರೆದು ಮನೆಯೊಳಗಡೆಯಿಂದ ಮಗುವನ್ನು ರಕ್ಷಿಸಿದ್ದಾರೆ.
ಸ್ಥಳೀಯರು ಬೆಂಕಿ ನಂದಿಸಲು ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮನೆ ಸಂಪೂರ್ಣ ಭಸ್ಮವಾಗಿದ್ದು, ಮನೆಯಲ್ಲಿದ್ದ ವಸ್ತುಗಳು, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಪಾರ ನಷ್ಟ ಸಂಭವಿಸಿದೆ.ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಇದ್ದ ಮನೆಯೂ ಇಲ್ಲದಾಗಿದೆ, ಈ ಕುರಿತು ತಹಸೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಮಾಹಿತಿ ನೀಡಿದಾಗ, ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್, ಪರಿಶೀಲನೆ ಮಾಡಿದ ನಂತರ ಮಾತನಾಡಿ, ಬೆಂಕಿ ಹೊತ್ತಿಕೊಂಡಾಗ ವಿದ್ಯುತ್ ಷಾರ್ಟ್ ಸರ್ಕ್ಯೂಟ್ ನಿಂದ ಹೆಚ್ಚಿನ ಅವಘಡ ಸಂಭವಿಸಿದೆ. ಅಲ್ಲದೇ ಮನೆಯ ಮೇಲೆ ಹೊದಿಸಿದ್ದ ಪ್ಲಾಸ್ಟಿಕ್ ಹೊದಿಕೆ ಮತ್ತು ಬಿದಿರಿನಿಂದ ಮಾಡಿದ ಮೇಲ್ಚಾವಣಿಯಿಂದಾಗಿ ಬೆಂಕಿ ಹೆಚ್ಚು ಉರಿದಿದ್ದು ಮನೆ ಭಸ್ಮವಾಗಿದೆ. ಈ ಕುರಿತು ಕಾನೂನು ಚೌಕಟ್ಟಿನೊಳಗೆ ಪರಿಶೀಲನೆ ಪರಿಹಾರ ಕ್ರಮಕ್ಕೆ ಮುಂದಾಗಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.