ಹಾನಗಲ್ಲ: ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಆಕಸ್ಮಿಕ ಬೆಂಕಿ ತಗುಲಿ ಔಷಧಿ ಮಾತ್ರೆಗಳು, ವೈದ್ಯಕೀಯ ವಸ್ತುಗಳು ಹಾಗೂ ವಿವಿಧ ಸಾಮಗ್ರಿ ಸೇರಿದಂತೆ ೯೦ ಲಕ್ಷ ರು.ಗಳಷ್ಟು ಹಾನಿ ಸಂಭವಿಸಿದ್ದು, ಶೀಘ್ರ ಸುರಕ್ಷತಾ ಕ್ರಮದ ಮೂಲಕ ಆಸ್ಪತ್ರೆಯ ಒಳ, ಹೊರ ರೋಗಿಗಳನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.ಶನಿವಾರ ಸಂಜೆ ೪ ಗಂಟೆಯ ಹೊತ್ತಿಗೆ ಆಸ್ಪತ್ರೆಯ ಮೊದಲ ಮಹಡಿಯಲ್ಲಿನ ಔಷಧಿ ಸಂಗ್ರಹಣಾ ಘಟಕಕ್ಕೆ ಬೆಂಕಿ ತಗುಲಿದ್ದು, ಇದಕ್ಕೆ ಕಾರಣ ತಿಳಿದು ಬಂದಿಲ್ಲ. ವಿದ್ಯುತ್ ಅವಘಡದಿಂದಾಗಿ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಕೋಣೆಯಲ್ಲಿದ್ದ ಲಕ್ಷಾಂತರ ರು. ಮೊತ್ತದ ಡ್ರಗ್ಸ, ಆಸ್ಪತ್ರೆಗೆ ಸಂಬಂಧಿಸಿದ ವಿವಿಧ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

೨೬ ಒಳರೋಗಿಗಳು, ಐವರು ಡಯಾಲಿಸಿಸ್ ರೋಗಿಗಳು, ಮೂವತ್ತಕ್ಕೂ ಅಧಿಕ ಹೊರರೋಗಿಗಳು ಈ ಸಂದರ್ಭದಲ್ಲಿ ಅಸ್ಪತ್ರೆಯಲ್ಲಿದ್ದರು ಎಂಬ ವರದಿಯಿದೆ. ತಕ್ಷಣ ಇಲ್ಲಿರುವ ರೋಗಿಗಳನ್ನು ಶಿಗ್ಗಾಂವಿ, ಬ್ಯಾಡಗಿ, ಹಾವೇರಿ ಸರ್ಕಾರಿ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ. ಹೀಗಾಗಿ ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಬೆಂಕಿ ಹೊತ್ತಿದ ಸುದ್ದಿ ತಿಳಿಯುತ್ತಿದ್ದಂತೆ ಹಾನಗಲ್ಲಿನ ಅಗ್ನಿಶಾಮಕ ದಳದ ಒಂದು ವಾಹನ ತಕ್ಷಣ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿತು. ಅದರ ಬೆನ್ನಲ್ಲೇ ಹಾವೇರಿಯಿಂದ ಇನ್ನೊಂದು ವಾಹನ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಸಂಜೆ ೭ ಗಂಟೆ ಹೊತ್ತಿಗೆ ಬೆಂಕಿ ಆರಿಸುವ ಪ್ರಕ್ರಿಯೆ ಪೂರ್ಣಗೊಂಡು, ಯಾವುದೇ ಜೀವಹಾನಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಲಾಯಿತು. ೨೦ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿಗಳು ಸಕಾಲಿಕವಾಗಿ ಪ್ರಯತ್ನಿಸಿರುವುದರಿಂದ ಬೆಂಕಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಹಾನಗಲ್ಲಿನ ತಮ್ಮ ಕಚೇರಿಯಲ್ಲಿದ್ದ ಶಾಸಕ ಶ್ರೀನಿವಾಸ ಮಾನೆ ಆಸ್ಪತ್ರೆಗೆ ಆಗಮಿಸಿ, ಬೆಂಕಿ ಆರಿಸುವಲ್ಲಿ ಅಗತ್ಯ ಮಾಗದರ್ಶನ ಮಾಡಿದರು. ಕೂಡಲೇ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ತಹಸೀಲ್ದಾರ್ ಎಸ್. ರೇಣುಕಾ, ಸಿಪಿಐ ಬಸವರಾಜ ಹಳಬಣ್ಣನವರ, ಜಿಲ್ಲಾ ವೈದ್ಯಾಧಿಕಾರಿ ಡಾ. ಜಯಾನಂದ್, ಆಡಳಿತ ವೈದ್ಯಾಧಿಕಾರಿ ಡಾ. ಅಖಿಲೇಶ್ ಮಾಳೋದೆ, ಹೈಕೋರ್ಟ್ ವಕೀಲ ಸಂದೀಪ ಪಾಟೀಲ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ತಹಸೀಲ್ದಾರ್, ರಾಜಶೇಖರಗೌಡ ಕಟ್ಟೇಗೌಡರ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲಿಸಿ ಮಾಹಿತಿ ಪಡೆದರು.ನಾಲ್ಕೈದು ದಿನಗಳ ಹಿಂದೆ ಇಡೀ ಆಸ್ಪತ್ರೆಯ ಹವಾ ನಿಯಂತ್ರಕ ಯಂತ್ರವನ್ನು ದುರಸ್ತಿಗೊಳಿಸಿದ್ದರೆನ್ನಲಾಗಿದೆ. ಆದರೆ ಔಷಧ ಸಂಗ್ರಹಾಗಾರದಲ್ಲಿದ್ದ ಮದರ್ ಬೋರ್ಡನಿಂದ ಬೆಂಕಿ ಹೊತ್ತಿ ಇಷ್ಟೆಲ್ಲ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತು ತನಿಖೆಯಿಂದಲೇ ವಾಸ್ತವ ತಿಳಿದುಬರಬೇಕಿದೆ. ಆಸ್ಪತ್ರೆಗೆ ಬೆಂಕಿ ತಗುಲಿ ಬಹಳಷ್ಟು ನಷ್ಟವಾಗಿದೆ. ವೈದ್ಯರು ಘಟನೆ ನಡೆಯುತ್ತಿದ್ದಂತೆ ಶೀಘ್ರ ರೋಗಿಗಳನ್ನು ಇಲ್ಲಿನ ಆಸ್ಪತ್ರೆಯಿಂದ ಹೊರತಂದು ಅಗತ್ಯಕ್ಕನುಗುಣವಾಗಿ ಬೇರೆ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ಕೂಡಲೇ ಈ ಬೆಂಕಿ ಅವಘಡಕ್ಕೆ ಕಾರಣವನ್ನು ಪರಿಶೀಲಿಸಿ, ಮತ್ತೆ ಇಂಥ ಘಟನೆ ಮರುಕಳಿಸದಂತೆ ವಿದ್ಯುತ್ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ಅಕ್ಕಿಆಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು. ಔಷಧಿಗಳು ಸುಟ್ಟು ಹೋಗಿರುವುದರಿಂದ ಶೀಘ್ರ ಆಸ್ಪತ್ರೆಗೆ ಅಗತ್ಯವಿರುವ ಔಷಧಿ ಹಾಗೂ ಚಿಕಿತ್ಸಾ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.