ಸಾರಾಂಶ
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ರೈತರೊಬ್ಬರ ಹೊಲದಲ್ಲಿ ಸಂಗ್ರಹಿಸಿದ್ದ ಸೋಯಾಬೀನ್ ಬಣವೆಗೆ ಬುಧವಾರ ತಡರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವಾಗಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕಿನ ದೊಡವಾಡ ಗ್ರಾಮದ ರೈತರೊಬ್ಬರ ಹೊಲದಲ್ಲಿ ಸಂಗ್ರಹಿಸಿದ್ದ ಸೋಯಾಬೀನ್ ಬಣವೆಗೆ ಬುಧವಾರ ತಡರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವಾಗಿದೆ. ಸೋಯಾಬೀನ್ ಬಣವೆ ರೈತ ಸಿದ್ದಪ್ಪ ವೀರಭದ್ರಪ್ಪ ಹುದಲಿ ಅವರಿಗೆ ಸೇರಿದೆ. ಬೆಂಕಿಯ ಕೆನ್ನಾಲಿಗೆಗೆ ಸೋಯಾಬೀನ್ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಎಣ್ಣೆ ಅಂಶದ ಕಾಯಿ ಇರುವುದರಿಂದ ಬೆಂಕಿ ತೀವ್ರಗೊಂಡು ಇಡೀ ಬಣವೆ ಹೊತ್ತಿ ಉರಿಯುತ್ತಿದ್ದಾಗ ಪಕ್ಕದಲ್ಲೇ ಇದ್ದ ಶೆಡ್ಡಿನಲ್ಲಿನ ದನಕರುಗಳು ಬೆಂಕಿಯ ಶಾಖಕ್ಕೆ ಒದರುತ್ತಿದ್ದುದನ್ನು ಕಂಡು ಅಲ್ಲೇ ಮಲಗಿದ್ದ ರೈತ ಎಚ್ಚರಗೊಂಡು ಅಕ್ಕಪಕ್ಕದ ಹೊಲಗಳ ರೈತರನ್ನು ಕೂಗಿದ್ದು, ರೈತರು ಸೇರಿ ಬೆಂಕಿ ಆರಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೈಲಹೊಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. 11 ಎಕರೆಯಲ್ಲಿ ಬೆಳೆದ ಸೋಯಾಬೀನ್ ಬೆಳೆ ಹಾಳಾಗಿದೆ. ದೊಡವಾಡ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.