ಆಸಕ್ಮಿಕ ಬೆಂಕಿ: ರಾಗಿ ಮೆದೆ ಸಂಪೂರ್ಣ ಭಸ್ಮ

| Published : Dec 21 2024, 01:18 AM IST

ಸಾರಾಂಶ

ಮಾಗಡಿ: ಆಕಸ್ಮಿಕ ಬೆಂಕಿ ಬಿದ್ದು ₹2 ಲಕ್ಷ ರು. ಮೌಲ್ಯದ ರಾಗಿ ಮೆದೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

ಮಾಗಡಿ: ಆಕಸ್ಮಿಕ ಬೆಂಕಿ ಬಿದ್ದು ₹2 ಲಕ್ಷ ರು. ಮೌಲ್ಯದ ರಾಗಿ ಮೆದೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ. ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮದ ತಿಮ್ಮೇಗೌಡರು 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆ ಕೊಯ್ದು ಮೆದೆ ಹಾಕಿದ್ದರು. ಇನ್ನೆರಡು ದಿನಗಳಲ್ಲಿ ರಾಗಿ ಬಡಿಸಬೇಕಿತ್ತು. ಆದರೆ ಅಷ್ಟರಲ್ಲೇ ರಾಗಿ ಮೆದೆ ಬೆಂಕಿಗೆ ಆಹುತಿಯಾಗಿದೆ. ಆದರೆ ಮೆದೆಗೆ ಬೆಂಕಿ ಬಿದ್ದ ಮಾಹಿತಿ ಸಿಕ್ಕಿಲ್ಲ. ರೈತ ತಿಮ್ಮೇಗೌಡರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ರೈತರ ಶ್ರಮ ನಿಮಿಷದಲ್ಲಿ ಭಸ್ಮ:

ರೈತ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಂದು ಬಾಯಿಗೆ ಬರದಂತಾಗಿದೆ. ಬೆಳೆಗೆ ಹಾಕಿದ್ದ ಬಂಡವಾಳ, ಕೂಲಿ ಹಣ, ಹಸುಗಳ ಮೇವು ಎಲ್ಲವೂ ಬೆಂಕಿಯಲ್ಲಿ ಬೆಂದು ಕರಕಲಾಗಿದ್ದು ದಿಕ್ಕು ತೋಚದಂತಾಗಿದೆ. ವರ್ಷದಿಂದ ಪಟ್ಟ ಶ್ರಮಕ್ಕೆ ಬೆಂಕಿಬಿದ್ದು ನಿಮಿಷದಲ್ಲಿ ಭಸ್ಮವಾಗಿದೆ. ಇದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದು, ನಮ್ಮ ಸಂಕಷ್ಟ ಅರಿತು ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಎಂದು ರೈತ ತಿಮ್ಮೇಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಾನವೀಯತೆ ಮೆರೆದ ಗ್ರಾಮಸ್ಥರು:

ರಾಗಿ ಮೆದೆಗೆ ಬೆಂಕಿ ಬಿದ್ದರುವ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಸಿಬ್ಬಂದಿ ಬರುವ ವೇಳೆಗೆ ಗ್ರಾಮಸ್ಥರೆಲ್ಲರು ಸೇರಿ ಬೆಂಕಿ ಆರಿಸಿ, ಸುತ್ತಮುತ್ತಲ ಮೆದೆಗಳಿಗೆ ಬೆಂಕಿ ಹಬ್ಬದಂತೆ ತಡೆದರು. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಉಳಿದ ಬೆಂಕಿ ನಂದಿಸಿದರೂ ಆ ವೇಳೆಗೆ ಸಂಪೂರ್ಣ ಮೆದೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿತ್ತು.

ಕೋಟ್‌..............

ಒಕ್ಕಣೆ ಮಾಡಿ ರಾಗಿ ಮನೆಯೊಳಗೆ ತುಂಬಿಸಿಕೊಳ್ಳುವ ಸಮಯದಲ್ಲಿ ರೈತನ ಕನಸಿಗೆ ಕೊಳ್ಳಿ ಇಟ್ಟಂತೆ ಮೆದೆಗೆ ಬೆಂಕಿ ಬಿದ್ದಿದೆ. ಇದರಿಂದ ತಿಮ್ಮೇಗೌಡ ಮತ್ತು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರಿ ಅಧಿಕಾರಿಗಳು ಅವರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಒದಗಿಸಿಕೊಟ್ಟು ಸಹಕರಿಸಬೇಕು.

-ವಿ.ಸಿ.ಜಯಣ್ಣ, ಗ್ರಾಪಂ ಮಾಜಿ ಅಧ್ಯಕ್ಣ, ಹಂಚಿಕುಪ್ಪೆ