ಆಕಸ್ಮಿಕ ಬೆಂಕಿ: ಮೂರು ಗುಡಿಸಲು ಸುಟ್ಟು ಕರಕಲು, ಅಪಾರ ಹಾನಿ

| Published : May 16 2024, 12:45 AM IST

ಆಕಸ್ಮಿಕ ಬೆಂಕಿ: ಮೂರು ಗುಡಿಸಲು ಸುಟ್ಟು ಕರಕಲು, ಅಪಾರ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಅಥಣಿ ಪಟ್ಟಣದ ಹೊರವಲಯದಲ್ಲಿ ಗುಡಿಸಲು ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಅಥಣಿಆಕಸ್ಮಿಕವಾಗಿ ತಗುಲಿದ ಬೆಂಕಿಯ ಕೆನ್ನಾಲಿಗೆಗೆ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಸಮೀಪದಲ್ಲಿದ್ದ ಎರಡು ಗುಡಿಸಲಿಗೆ ಬೆಂಕಿ ಆವರಿಸಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಅಥಣಿ ಪಟ್ಟಣದ ಹೊರವಲಯದ ಪ್ರದೇಶದಲ್ಲಿ ನಡೆದಿದೆ.

ಹಮಜಾಅಲಿ ಆದಮಸಾಬ್‌ ಬಾಳೊಬಾಗೆ ಸೇರಿದ ಗುಡಿಸಲಿಗೆ ಮೊದಲು ಬೆಂಕಿ ತಗಲಿದ್ದು, ಪಕ್ಕದಲ್ಲಿದ್ದ ಒಂದೇ ಕುಟುಂಬದ 2 ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಕಾರಣ ಸಾಕುಪ್ರಾಣಿಗಳ ಪ್ರಾಣ ಸೇರಿದಂತೆ ಅಪಾರ ಹಾನಿ ಸಂಭವಿಸಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಿದ್ದೇನು?:ಗುಡಿಸಲು ಮನೆಯಲ್ಲಿ ಯಾರು ಇಲ್ಲದ ಸಮಯ ಸೋಮವಾರ ಮಧ್ಯಾಹ್ನ 12 ಗಂಟೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿಯ ಕೆನ್ನಾಲಿಗೆಗೆ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಸಮೀಪದಲ್ಲಿದ್ದ ಇನ್ನೂ ಎರಡು ಗುಡಿಸಲುಗಳಿಗೆ ಬೆಂಕಿ ಆವರಿಸಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಗುಡಿಸಿಲಿನಲ್ಲಿದ್ದ 5 ಮೇಕೆಗಳು, 8 ಕೋಳಿಗಳು ಸಾವನ್ನಪ್ಪಿದ್ದಲ್ಲದೇ ಗುಡಿಸಲುಗಳಲ್ಲಿದ್ದ ಬೈಕ್, ದವಸ ಧಾನ್ಯಗಳು, ಚಿನ್ನ ಬೆಳ್ಳಿ ಆಭರಣಗಳು, ಗೃಹಬಳಿಕೆಯ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ನೆರೆಹೊರೆಯ ಜನರು ಅಗ್ನಿಶಾಮಕ ಠಾಣಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಗುಡಿಸಿಲಿನಲ್ಲಿ ಯಾರು ಇಲ್ಲದೇ ಹೊಲ ಕೆಲಸದಲ್ಲಿ ತೊಡಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಲಕ್ಷಾಂತರ ರುಪಾಯಿ ಬೆಲೆಬಾಳುವ ಗೃಹಬಳಕೆ ವಸ್ತುಗಳು ಮತ್ತು ಸಾಕು ಪ್ರಾಣಿಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಎಂ.ಎಂ.ಮಿರ್ಜಿ, ಪಶು ವೈದ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಶಾಸಕ ಲಕ್ಷ್ಮಣ ಸವದಿ ಸುಪುತ್ರ ಚಿದಾನಂದ ಸವದಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿ ಧನ ಸಹಾಯ ಮಾಡಿದರು. ನಮ್ಮ ತಂದೆಯವರ ಗಮನಕ್ಕೆ ತಂದು ಪ್ರಕೃತಿ ವಿಕೋಪದಡಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.