ಗುಡಿಸಲಿಗೆ ಬೆಂಕಿ: ನಗದು, ದಾಖಲೆಪತ್ರ ಭಸ್ಮ

| Published : Oct 19 2024, 12:19 AM IST

ಗುಡಿಸಲಿಗೆ ಬೆಂಕಿ: ನಗದು, ದಾಖಲೆಪತ್ರ ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಶೀಟ್ ಅಳವಡಿಸಿರುವ ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡಿದ್ದು ಮನೆಯೊಳಗೆ ಬ್ಯಾಗ್‌ವೊಂದರಲ್ಲಿ ಇಟ್ಟಿದ್ದ ೧೫೦೦೦ ನಗದು, ದಾಖಲೆ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ

ಕನ್ನಡಪ್ರಭ ವಾರ್ತೆ ಪುತ್ತೂರು

ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಸಾರೆಪುಣಿ ಪಾದೆಡ್ಕ ಎಂಬಲ್ಲಿ ಶುಕ್ರವಾರ ಹಗಲು ಹೊತ್ತಿನಲ್ಲಿ ನಡೆದಿದೆ.

ಪಾದೆಡ್ಕ ನಿವಾಸಿ ಪದ್ಮಾವತಿ ಎಂಬವರ ಶೀಟ್ ಅಳವಡಿಸಿರುವ ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡಿದ್ದು ಮನೆಯೊಳಗೆ ಬ್ಯಾಗ್‌ವೊಂದರಲ್ಲಿ ಇಟ್ಟಿದ್ದ ೧೫೦೦೦ ನಗದು, ದಾಖಲೆ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಗುಡಿಸಲಿಗೆ ಗೋಡೆ ಇಲ್ಲದೇ ಇರುವುದರಿಂದ ಗುಡಿಸಲಿನ ಸುತ್ತ ನೆಟ್ ಅಳವಡಿಸಲಾಗಿದ್ದು ಎರಡು ಬದಿಯ ನೆಟ್ ಸಂಪೂರ್ಣ ಸುಟ್ಟು ಹೋಗಿದೆ. ಪದ್ಮಾವತಿ ಅವರ ಪತಿ ನಿಧನ ಹೊಂದಿದ್ದು ಈ ಮನೆಯಲ್ಲಿ ಪದ್ಮಾವತಿ ಮತ್ತು ಅವರ ೮ ವರ್ಷದ ಪುತ್ರ ವಾಸವಾಗಿದ್ದಾರೆ.

ಪದ್ಮಾವತಿಯವರು ಎಂದಿನಂತೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಸ್ಥಳೀಯರು ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿರುವ ಬಗ್ಗೆ ತಿಳಿಸಿದ್ದು ಕೂಡಲೇ ಪದ್ಮಾವತಿ ಮನೆಗೆ ಬಂದಿದ್ದಾರೆ. ಆ ವೇಳೆಗಾಗಲೇ ಬೆಂಕಿ ಆವರಿಸಿತ್ತು. ಘಟನೆ ಕುರಿತು ಪದ್ಮಾವತಿಯವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೆದಂಬಾಡಿ ಗ್ರಾಮ ಸಹಾಯಕ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.------------ಗುಂಡಿಕ್ಕಿ ಕಡವೆ ಹತ್ಯೆ: ಮಗನ ಹುಟ್ಟುಹಬ್ಬದ ಔತಣಕ್ಕೆ ಮಾಂಸ ದಾಸ್ತಾನು

ಉಪ್ಪಿನಂಗಡಿ: ಮಗನ ಹುಟ್ಟು ಹಬ್ಬಕ್ಕಾಗಿ ಕಡವೆಯನ್ನು ಗುಂಡಿಕ್ಕಿ ಕೊಂದ ಮಾಂಸವನ್ನು ಮನೆಯ ಪ್ರಿಝರ್ ನಲ್ಲಿ ದಾಸ್ತಾನು ಇರಿಸಲಾದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.ಲಭ್ಯ ಮಾಹಿತಿ ಪ್ರಕಾರ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿನ ನಿವಾಸಿ ಸುರೇಶ್ ಮತ್ತವರ ಸಹವರ್ತಿ ಜೊತೆಗೂಡಿ ಸರ್ಕಾರಿ ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು. ಮಗನ ಹುಟ್ಟು ಹಬ್ಬದ ಔತಣಕೂಟಕ್ಕೆಂದು ಕಡವೆ ಮಾಂಸವನ್ನು ಮನೆಯ ಫ್ರಿಝರ್‌ನಲ್ಲಿರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇಲಾಖಾ ಸಿಬ್ಬಂದಿ ಸುನಿಲ್, ಶಿವಾನಂದ ಅವರ ತಂಡ ಸುರೇಶ್ ಮನೆಗೆ ದಾಳಿ ನಡೆಸಿ ಸಂಗ್ರಹಿಸಿಟ್ಟ ಮಾಂಸ ಹಾಗೂ ಹತ್ಯೆಗೆ ಬಳಸಲಾದ ಕೋವಿಯನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.

ಕಾರ್ಯಾಚರಣೆ ವೇಳೆ ಆರೋಪಿಗಳು ಗುಂಡ್ಯ ಹೊಳೆಯನ್ನು ಈಜಿ ದಾಟುವ ಮೂಲಕ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.