ಸಂಚಾರಿ ನಿಯಮ ಪಾಲನೆಯಿಂದ ಅಪಘಾತಗಳ ತಡೆ ಸಾಧ್ಯ: ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್

| Published : Feb 13 2024, 12:45 AM IST

ಸಂಚಾರಿ ನಿಯಮ ಪಾಲನೆಯಿಂದ ಅಪಘಾತಗಳ ತಡೆ ಸಾಧ್ಯ: ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಅಪಘಾತಗಳು ಸಂಭವಿಸಿ ಸಾವು-ನೋವು ಉಂಟಾಗಲು ವಾಹನ ಚಾಲಕರ ಅಜಾಗರೂಕತೆಯೇ ಮುಖ್ಯ ಕಾರಣ. ದ್ವಿಚಕ್ರ ಸೇರಿದಂತೆ ಯಾವುದೇ ವಾಹನ ಚಾಲನೆ ಮಾಡುವ ವ್ಯಕ್ತಿ ಚಾಲನಾ ಪರವಾನಗಿ ಜೊತೆಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವುದು, ಮದ್ಯಪಾನ ಸೇವನೆ, ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ, ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲವಾಹನ ಚಾಲಕರು ತಮ್ಮ ಜೀವ ರಕ್ಷಣೆ ಜೊತೆಗೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವತಿಯಿಂದ ೩೫ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯ ಹಾಗೂ ಬಿಜಿಎಸ್ ಶಿಕ್ಷಣ ಟ್ರಸ್ಟಿನ ಅಧೀನ ಶಾಲಾ-ಕಾಲೇಜುಗಳ ವಾಹನ ಚಾಲಕರಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಸ್ತೆ ಅಪಘಾತಗಳು ಸಂಭವಿಸಿ ಸಾವು-ನೋವು ಉಂಟಾಗಲು ವಾಹನ ಚಾಲಕರ ಅಜಾಗರೂಕತೆಯೇ ಮುಖ್ಯ ಕಾರಣ. ದ್ವಿಚಕ್ರ ಸೇರಿದಂತೆ ಯಾವುದೇ ವಾಹನ ಚಾಲನೆ ಮಾಡುವ ವ್ಯಕ್ತಿ ಚಾಲನಾ ಪರವಾನಗಿ ಜೊತೆಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವುದು, ಮದ್ಯಪಾನ ಸೇವನೆ, ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ, ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ನಾಗಮಂಗಲ ಎಆರ್‌ಟಿಒ ಆಗಿ ತಾವು ಅಧಿಕಾರ ವಹಿಸಿಕೊಂಡ ದಿನದಿಂದ ಈವರೆಗೂ ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಯಾವೊಂದು ವಾಹನಗಳೂ ಸಹ ಅಪಘಾತವಾಗಿರುವ ಕುರಿತು ವರದಿಯಾಗಿಲ್ಲದಿರುವುದು ಸಂತಸದ ವಿಷಯ. ಅದಕ್ಕಾಗಿ ಶಿಕ್ಷಣ ಸಂಸ್ಥೆಯ ವಾಹನ ಚಾಲಕರಿಗೆ ನಿರ್ವಹಣೆ ಮಾಡುತ್ತಿರುವ ಮುಖ್ಯಸ್ಥರಿಗೆ ಇಲಾಖೆಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಜಿ. ಶಿವರಾಮು ಮಾತನಾಡಿ, ಯಾವುದೇ ಚಾಲಕರಿಗೆ ಶಿಸ್ತು, ಸಮಯಪ್ರಜ್ಞೆ ಮತ್ತು ಏಕಾಗ್ರತೆ ಅತಿ ಮುಖ್ಯ. ಈ ತರಬೇತಿ ಕಾರ್ಯಗಾರ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಚಾಲಕರಿಗಷ್ಟೇ ಅಲ್ಲದೆ ಎಲ್ಲ ಚಾಲಕರಿಗೂ ಸದುಪಯೋಗವಾಗಬೇಕು ಎಂದರು.

ವೈದ್ಯರು, ಚಾಲಕರೂ ಸೇರಿದಂತೆ ಯಾವುದೇ ವೃತ್ತಿಯಲ್ಲಿರುವವರಿಗೆ ತಾಳ್ಮೆ ಮತ್ತು ಶಿಸ್ತು ಇರಬೇಕು. ತರಬೇತಿ ಕಾರ್ಯಾಗಾರಗಳು ಆಗಾಗ್ಗೆ ನಡೆಯುತ್ತಿರಬೇಕು. ನಿಮ್ಮ ಶಿಸ್ತು, ತಾಳ್ಮೆ ಮತ್ತು ಪಡೆದುಕೊಳ್ಳುವ ತರಬೇತಿ ಕೇವಲ ನಿಮ್ಮನಷ್ಟೇ ಕಾಪಾಡುವುದಿಲ್ಲ. ನಿಮ್ಮೊಂದಿಗೆ ಪ್ರಯಾಣಿಸುವ ಎಲ್ಲರನ್ನೂ ಕಾಪಾಡುವ ಜೊತೆಗೆ ಅವರನ್ನೇ ನಂಬಿಕೊಂಡಿರುವ ಕುಟುಂಬಸ್ಥರನ್ನೂ ಕಾಪಾಡುತ್ತದೆ. ಒಬ್ಬ ವ್ಯಕ್ತಿ ಅಜಾಗರೂಕತೆ ಅಥವಾ ಅಪಘಾತದಲ್ಲಿ ಮೃತಪಟ್ಟರೆ ಒಂದು ಕುಟುಂಬಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ನಷ್ಟವಾಗುತ್ತದೆ. ಆದ್ದರಿಂದ ತಮ್ಮ ಜವಾಬ್ದಾರಿಯನ್ನು ಅರಿತು ಪ್ರತಿಯೊಬ್ಬ ಚಾಲಕರು ಕರ್ತವ್ಯ ನಿರ್ವಹಿಸಬೇಕು ಎಂದರು.

ಬೆಂಗಳೂರಿನ ಹಿರಿಯ ಮೋಟಾರು ವಾಹನ ನಿರೀಕ್ಷಕ ಎಸ್.ಪಿ. ರಾಜೇಶ್ ಚಾಲಕರ ಜವಾಬ್ದಾರಿ ಹಾಗೂ ಪ್ರಸ್ತುತ ಬದಲಾದ ನಿಯಮಾವಳಿಗಳ ಕುರಿತು ತಿಳಿಸಿಕೊಟ್ಟರು. ಎಆರ್‌ಟಿಓ ಕಚೇರಿಯ ಅಧೀಕ್ಷಕ ಸತೀಶ್ ಚಾಲಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಆದಿಚುಂಚನಗಿರಿ ಆಸ್ಪತ್ರೆಯ ರಿಜಿಸ್ಟ್ರಾರ್ ಬಿ.ಕೆ.ಉಮೇಶ್, ಆಡಳಿತ ಅಧಿಕಾರಿ ಸಿ.ಎನ್.ಚಂದನ್‌ರಾಜ್, ಸಮುದಾಯ ಶಾಸ್ತ್ರ ವಿಭಾಗದ ಡಾ.ವಿಜಯ್‌ಎಸ್.ಹೂಗಾರ್ ಸೇರಿದಂತೆ ಅಧೀನ ಶಾಲಾ ಕಾಲೇಜುಗಳ ವಾಹನ ಚಾಲಕರು ಮತ್ತು ದೇವಿಹಳ್ಳಿ ಟೋಲ್ ಸಿಬ್ಬಂದಿ ಇದ್ದರು.