ಸಾರಾಂಶ
1995ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ದ ವೇಳೆ ಚಂದ್ರೆ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿದ್ದರು. ಈ ವೇಳೆ ವಿರಾಜ್, ರೂಪಶ್ರೀ, ಸರ್ಧಾರ್, ನೋಕಿಫರ್ಮಿನ್, ಆಶೀಫ್ ಹಾಗೂ ಹೇಮಲತಾ ಅವರಿಗೂ ಸಹ ನಿವೇಶನ ಹಂಚಿಕೆ ಮಾಡಿದ್ದಾರೆ. ಈ ನಿವೇಶನಗಳಿಗೆ ಪುರಸಭೆಯಿಂದ ಇ-ಸ್ವತ್ತು ಸಹ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವಧಿಯಲ್ಲಿ ಹಂಚಿಕೆ ಮಾಡಲಾಗಿದ್ದ ನಿವೇಶನವನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಪಟ್ಟಣದ ಚಂದ್ರೆ ಬಡಾವಣೆ ನಿವಾಸಿಗಳು ಪುರಸಭೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ಪಟ್ಟಮದ ಪುರಸಭೆಯ ಸಭಾಂಗಣದ ಮುಂಭಾಗದ ಕೈಯಲ್ಲಿ ಘೋಷಣೆ ಕರಪತ್ರ ಹಿಡಿದು ಪ್ರತಿಭಟನೆ ನಡೆಸಿದ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
1995ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ದ ವೇಳೆ ಚಂದ್ರೆ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿದ್ದರು. ಈ ವೇಳೆ ವಿರಾಜ್, ರೂಪಶ್ರೀ, ಸರ್ಧಾರ್, ನೋಕಿಫರ್ಮಿನ್, ಆಶೀಫ್ ಹಾಗೂ ಹೇಮಲತಾ ಅವರಿಗೂ ಸಹ ನಿವೇಶನ ಹಂಚಿಕೆ ಮಾಡಿದ್ದಾರೆ. ಈ ನಿವೇಶನಗಳಿಗೆ ಪುರಸಭೆಯಿಂದ ಇ-ಸ್ವತ್ತು ಸಹ ಮಾಡಿದ್ದಾರೆ ಎಂದರು.ಕೆಲವರಿಗೆ ಮನೆ ನಿರ್ಮಿಸಲು ಪುರಸಭೆಯಿಂದ ಲೈಸೆನ್ಸ್ ಸಹ ನೀಡಿದ್ದಾರೆ. ಅಲ್ಲದೇ, ಆ ಸ್ಥಳದಲ್ಲಿ ಮನೆ ನಿರ್ಮಿಸಲು ಈಗಿನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಆದರೆ, ರೂಪಶ್ರೀ ಹಾಗೂ ವಿರಾಜ್ ಅವರಿಗೆ ನೀಡಿರುವ ನಿವೇಶನವನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ಮಾಡಿದ್ದಾರೆ. ನಮಗೆ ನೀಡಿರುವ ನಿವೇಶನದಲ್ಲಿ ಮನೆ ನಿರ್ಮಿಸಲ ಮುಂದಾದರೆ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವಿಚಾರದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಬಗ್ಗೆ ಶಾಸಕರು ನಮಗೆ ನ್ಯಾಯ ದೊರಕಿಸಿಕೊಡಬೇಕು. ಅಕ್ರಮವಾಗಿ ನಿವೇಶನ ಮಾಡಿಸಿಕೊಂಡಿರುವ ವ್ಯಕ್ತಿಗಳು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಕ್ರಮವಹಿಸಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ವಿರಾಜ್, ರೂಪಶ್ರೀ, ಸರ್ಧಾರ್, ನೋಕಿಫರ್ಮಿನ್, ಆಶೀಫ್ ಹಾಗೂ ಹೇಮಲತಾ ಸೇರಿದಂತೆ ಬಡಾವಣೆಯ ಹಲವು ನಿವಾಸಿಗಳು ಹಾಜರಿದ್ದರು.