ಸಾರಾಂಶ
ಪಾಂಡವಪುರ ಪುರಸಭೆ ಈ ಹಿಂದಿನ ಖಾತೆ ವಿಷಯ ನಿರ್ವಾಹಕ ಕರ್ತವ್ಯ ಲೋಪ ಜತೆಗೆ ಖಾತೆ ಶಾಖೆಗೆ ಸಂಬಂಧಿಸಿದ ಕಡತಗಳನ್ನು ವರ್ಗಾವಣೆ ನಂತರವೂ ಪ್ರಭಾರ ನೀಡದಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ನಿಯಮಾನುಸಾರ ಕ್ರಮ ಕೈಗೊಳ್ಳುವ ಬಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪುರಸಭೆ ಈ ಹಿಂದಿನ ಖಾತೆ ವಿಷಯ ನಿರ್ವಾಹಕ ಕರ್ತವ್ಯ ಲೋಪ ಜತೆಗೆ ಖಾತೆ ಶಾಖೆಗೆ ಸಂಬಂಧಿಸಿದ ಕಡತಗಳನ್ನು ವರ್ಗಾವಣೆ ನಂತರವೂ ಪ್ರಭಾರ ನೀಡದಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ನಿಯಮಾನುಸಾರ ಕ್ರಮ ಕೈಗೊಳ್ಳುವ ಬಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ.2005ರಿಂದ 2021ರವರೆಗೆ ಪುರಸಭೆ ಖಾತೆ ವಿಷಯ ನಿರ್ವಹಣೆ ಮಾಡುತ್ತಿದ್ದ ಮಹದೇವಸ್ವಾಮಿ ಖಾತೆ ವಿಚಾರಗಳಿಗೆ ಸಂಬಂಧಿಸಿದಂತೆ ಹಲವು ಅಕ್ರಮ ಎಸಗಿರುವುದು ಕಡತಗಳ ಪರಿಶೀಲನೆ ವೇಳೆ ಕಂಡು ಬಂದಿದೆ.
ಜತೆಗೆ ಕೆಲ ಅಸೆಸ್ಮೆಂಟ್ ಪುಸ್ತಕಗಳು ಕೂಡ ಪುರಸಭೆಯಲ್ಲಿ ಲಭ್ಯವಿಲ್ಲ. ವರ್ಗಾವಣೆಗೊಂಡ ಬಳಿಕ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಡತ ಹಸ್ತಾಂತರಿಸಬೇಕು. ಆದರೆ, ಕರ್ತವ್ಯ ಅವಧಿಯಲ್ಲಿ ನಿರ್ವಹಿಸಿದ ಶಾಖೆಗಳ ಅಗತ್ಯ ಮಾಹಿತಿಗಳ ಕಡತಗಳನ್ನು ಸಂಬಂಧಿಸಿದ ವಿಷಯ ನಿರ್ವಾಹಕರುಗಳಿಗೆ ಸಂಪೂರ್ಣವಾಗಿ ಪ್ರಭಾರ ನೀಡಿಲ್ಲ. ಇದರಿಂದ ಕಚೇರಿ, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಹಾಗೂ ಸರ್ಕಾರ ಮತ್ತು ಮಾಹಿತಿ ಹಕ್ಕು ನಿಯಮದಡಿ ಕೇಳುವ ಮಾಹಿತಿ ಒದಗಿಸಲು ತೊಂದರೆಯಾಗುತ್ತಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.ಏಕ ನಿವೇಶನಗಳಿಗೆ ಖಾತೆ, ಇ-ಸ್ವತ್ತು ಮಾಡಿಕೊಡಲಾಗಿದೆ. ಪರಿವರ್ತನೆಗೊಂಡಿರುವ ಬಹು ನಿವೇಶನಗಳಿಗೆ ಸರ್ಕಾರ ರೂಪಿಸಿರುವ ನಿಯಮದಂತೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡಿಲ್ಲ. ಪುರಸಭೆ ವ್ಯಾಪ್ತಿಯ ನಿವೇಶನಗಳಿಗೆ ಖಾತೆ ಮಾಡಿಕೊಟ್ಟ ಬಳಿಕ ಅದನ್ನು ಪುಸ್ತಕದಲ್ಲಿ ದಾಖಲಿಸಬೇಕು. ಆದರೆ, ಈ ಯಾವುದೇ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸದೆ ಕರ್ತವ್ಯ ಲೋಪ ಎಸಗಲಾಗಿದೆ. ಇದರಿಂದ ಪುರಸಭೆ ವ್ಯಾಪ್ತಿಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.
ಕೆಲವೊಂದು ಸರ್ಕಾರಿ ನಿವೇಶನಗಳನ್ನು ಯಾವುದೇ ಆಧಾರವಿಲ್ಲದೆ ಖಾತೆ ಮಾಡಿಕೊಡಲಾಗಿದೆ. ಕರ್ತವ್ಯ ಲೋಪವೆಸಗಿರುವ ಮಹದೇವಸ್ವಾಮಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮ ವಹಿಸಲಾಗುವುದು. ನೋಟಿಸ್ ಜಾರಿ ಮಾಡಿದ್ದರು ಈವರೆಗೂ ಸಂಪೂರ್ಣ ಕಡತಗಳನ್ನು ಪ್ರಭಾರ ನೀಡಿಲ್ಲ ಎಂದು ನೋಟಿಸ್ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.