ಜಮೀನನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಸ್ಥೆ ಹೆಸರಿಗೆ ಖಾತೆ ಮಾಡಿ
KannadaprabhaNewsNetwork | Published : Oct 09 2023, 12:45 AM IST
ಜಮೀನನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಸ್ಥೆ ಹೆಸರಿಗೆ ಖಾತೆ ಮಾಡಿ
ಸಾರಾಂಶ
ಜಮೀನನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಸ್ಥೆ ಹೆಸರಿಗೆ ಖಾತೆ ಮಾಡಿ
- ತಹಸೀಲ್ದಾರ್‌ಗೆ ಕಾಲೇಜಿನ ಪ್ರಾಂಶುಪಾಲರ ಲಿಖಿತ ಅರ್ಜಿ ಸಲ್ಲಿಸಿ ಮನವಿ ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೂ ಸ್ವಾಧೀನವಾಗಿರುವ ಜಮೀನಿನ ಸರ್ವೇ ನಂಬರ್‌ಗಳನ್ನು ಸಂಸ್ಥೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಕಾಲೇಜಿನ ಪ್ರಾಂಶುಪಾಲ ನಾಗರಾಜು ತಹಸೀಲ್ದಾರರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಲಿಖಿತ ಅರ್ಜಿ ಸಲ್ಲಿಸಿರುವ ಅವರು, 1962 ರಲ್ಲಿ ಆರಂಭಗೊಂಡ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗೆ ಪಟ್ಟಣದ ಮೈಸೂರು- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಒಟ್ಟು 26.625 ಎಕರೆ ಭೂಮಿಯನ್ನು ಸಂಸ್ಥೆಯನ್ನು ನಡೆಸಲು ಅಂದಿನ ಮೈಸೂರು ಸರ್ಕಾರ ಭೂ-ಸ್ವಾಧೀನ ಮಾಡಿಕೊಂಡಿತ್ತು. ಸದರಿ ಭೂಮಿ ಕಾಲೇಜಿನ ವಶದಲ್ಲಿದೆ. ಸ್ವಾಧೀನವಾಗಿರುವ ಭೂಮಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯವಿದೆ. ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗೆ ಸೇರಿದ ಭೂಮಿಯಲ್ಲಿ 10 ಎಕರೆ 32 ಗುಂಟೆ ಭೂಮಿಯನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಮತ್ತು 2.82 ಎಕರೆ ಭೂಮಿಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿರ್ಮಾಣಕ್ಕೆ ನೀಡಲಾಗಿದೆ. ಈ ಜಾಗದಲ್ಲಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಮತ್ತು ಬಸ್ ಡಿಪೋ ಕಟ್ಟಡಗಳು ನಿರ್ಮಾಣಗೊಂಡು ಕಾರ್ಯನಿರ್ವಹಿಸುತ್ತಿವೆ. ಪಾಲಿಟೆಕ್ನಿಕ್ ಕಾಲೇಜಿಗೆ ಭೂ-ಸ್ವಾಧೀನವಾಗಿದ್ದರೂ 1968 ರಿಂದ ಸದರಿ ಭೂಮಿಯನ್ನು ಸಂಸ್ಥೆ ಹೆಸರಿಗೆ ಖಾತೆ ಮಾಡಿಲ್ಲ. ಆದ ಕಾರಣ ಎಂಜಿನಿಯರಿಂಗ್ ಕಾಲೇಜು ಮತ್ತು ಬಸ್ ಡಿಪೋಗೆ ಹಸ್ತಾಂತರವಾಗಿರುವ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ಸಂಸ್ಥೆಯ ಹೆಸರಿಗೆ ಖಾತೆ ಮಾಡಿ ಗಡಿ ನಿಗಧಿ ಪಡಿಸುವಂತೆ ಪ್ರಾಂಶುಪಾಲ ನಾಗರಾಜು ತಹಸೀಲ್ದಾರರಿಗೆ ಲಿಖಿತ ಮನವಿ ಮಾಡಿಕೊಂಡಿದ್ದಾರೆ. ಪಾಲಿಟೆಕ್ನಿಕ್ ಆವರಣದೊಳಗೆ ಇದ್ದ ಸಂಪರ್ಕ ಓಣಿ ರಸ್ತೆ ಮುಚ್ಚಿ ಹೋಗಿದೆ. ಇದರಿಂದ ಕಾಲೇಜಿನ ಹಿಂಭಾಗದ ಕೃಷಿ ಜಮೀನುಗಳಿಗೆ ರೈತರು ಹೋಗಲು ಅಡಚಣೆಯಾಗಿದೆ. ಮುಚ್ಚಿ ಹೋಗಿರುವ ಓಣಿ ರಸ್ತೆಯನ್ನು ಬಿಡಿಸಿಕೊಡುವಂತೆ ರೈತರು ಕ್ಷೇತ್ರದ ಶಾಸಕರು ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದಲೂ ಓಣಿ ರಸ್ತೆಯನ್ನು ಗುರುತಿಸುವುದು ಅತ್ಯಗತ್ಯವಾಗಿದೆ. ರಸ್ತೆ ಗುರುತಿಸುವ ಸಂಬಂಧ ಈ ಹಿಂದೆ ಕೆ.ಆರ್.ಪೇಟೆ ತಹಸೀಲ್ದಾರು ತಾಲೂಕು ಸರ್ವೇ ಇಲಾಖೆಗೂ ಪತ್ರ ಬರೆದಿದ್ದು ಇತ್ತೀಚೆಗೆ ತಾಲೂಕು ಸರ್ವೇ ಅಧಿಕಾರಿ ಪರಶಿವ ನಾಯಕ್ ಕಾಲೇಜು ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ವಾಧೀನಗೊಂಡಿರುವ ಭೂಮಿ ಕಾಲೇಜಿನ ಹೆಸರಿಗೆ ಖಾತೆಯಾಗದಿರುವುದರಿಂದ ಕಾಲೇಜಿನ ಆಸ್ತಿಯನ್ನು ಗುರುತಿಸಿ ರೈತರಿಗೆ ಅಗತ್ಯ ರಸ್ತೆ ಬಿಡಿಸಿಕೊಡಲು ಕಾಲೇಜಿನ ಹೆಸರಿಗೆ ಸ್ವಾಧೀನ ಭೂಮಿಯನ್ನು ಖಾತೆ ಮಾಡಿ ಗಡಿ ಗುರುತಿಸಿಕೊಡುವುದು ಅತ್ಯಗತ್ಯವಾಗಿದೆ. 8ಕೆಎಂಎನ್ ಡಿ12 ಸರ್ಕಾರಿ ಪಾಲಿಟೆಕ್ನಿಕ್.