ನಿಖರ ಬೆಳೆ ಸಮೀಕ್ಷೆ, ವಿಮಾ ಯೋಜನೆ ಅರಿವು ಅಗತ್ಯ

| Published : Jul 09 2025, 12:19 AM IST

ಸಾರಾಂಶ

ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ಹಾನಿಯಾದರೆ ಅಂತಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ಸಿಗಲಿದೆ.

ಕನ್ನಡಪ್ರಭ ವಾರ್ತೆ ಕುಂದಾಣ

ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಬೆಳೆ ವಿಮಾ ಸಂಸ್ಥೆಗಳು ಜಂಟಿಯಾಗಿ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸುವ ಮೂಲಕ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಪ್ರೇರೆಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸೂಚಿಸಿದರು.ಬೆಂ.ಗ್ರಾ. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೆಳೆ ಸಮೀಕ್ಷೆ, ಎಣ್ಣೆಕಾಳು ಅಭಿಯಾನ ಯೋಜನೆಯ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ಹಾನಿಯಾದರೆ ಅಂತಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ಸಿಗಲಿದೆ. ಹಾಗಾಗಿ ಅಧಿಕಾರಿಗಳು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಜಿಲ್ಲೆಯ ಎಲ್ಲಾ ರೈತರಿಗೆ ಜಾಗೃತಿ ಮೂಡಿಸಿ ಬೆಳೆ ವಿಮೆಗೆ ನೋಂದಾಯಿಸಲು ಪ್ರೇರೇಪಿಸಬೇಕು ಎಂದರು.ಯಾವ ಬೆಳೆಗೆ ಎಷ್ಟು ವಿಮೆ ಸಿಗಲಿದೆ ಎಂಬುದರ ಮಾಹಿತಿ ನೀಡಿದ ಅವರು, ರಾಗಿ (ಮಳೆಯಾಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹340 ಪಾವತಿಸಿದರೆ ವಿಮಾ ಮೊತ್ತ ₹17000 ಪಡೆಯಬಹುದು.ರಾಗಿ (ನೀರಾವರಿ ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹406 ಪಾವತಿಸಿದರೆ ವಿಮಾ ಮೊತ್ತ ₹20300 ಪಡೆಯಬಹುದು. ಭತ್ತ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹746 ಪಾವತಿಸಿದರೆ ವಿಮಾ ಮೊತ್ತ ₹37300, ಮುಸುಕಿನ ಜೋಳ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹452 ಪಾವತಿಸಿದರೆ ವಿಮಾ ಮೊತ್ತ ₹22600, ಮುಸುಕಿನ ಜೋಳ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹516 ಪಾವತಿಸಿದರೆ ವಿಮಾ ಮೊತ್ತ ₹25800, ಹುರಳಿ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹164 ಪಾವತಿಸಿದರೆ ವಿಮಾ ಮೊತ್ತ ₹8200, ನೆಲಗಡಲೆ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹436 ವತಿಸಿದರೆ ವಿಮಾ ಮೊತ್ತ ₹21800, ತೊಗರಿ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹384 ಪಾವತಿಸಿದರೆ ವಿಮಾ ಮೊತ್ತ ₹19200, ತೊಗರಿ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹402 ಪಾವತಿಸಿದರೆ ವಿಮಾ ಮೊತ್ತ ₹20100, ಟಮೊಟೊ ಬೆಳೆಗೆ ರೈತರು ಪ್ರೀಮಿಯಂ ಮೊತ್ತ ಎಕರೆಗೆ ₹1132 ಪಾವತಿಸಿದರೆ ವಿಮಾ ಮೊತ್ತ ₹56600 ಪಡೆಯಬಹುದು ಎಂದರು.ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಬಿ.ಜಿ ಕಲಾವತಿ, ಉಪನಿರ್ದೇಶಕಿ ಗಾಯಿತ್ರಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗುಣವಂತ ಜೆ, ರೇಷ್ಮೆ ಇಲಾಖೆ ಉಪನಿರ್ದೇಶಕ ಲಕ್ಷಣ, ಜಿಲ್ಲಾ ಮಟ್ಟದ ಅಧಿಕಾರಿಗಳು, ಬೆಳೆ ವಿಮೆ ಪ್ರತಿನಿಧಿಗಳು, ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಫೋಟೋ-8ಕೆಡಿಬಿಪಿ1- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಸೇರಿದಂತೆ ವಿವಿಧ ಯೋಜನೆಗಳ ಸಮನ್ವಯ ಸಭೆ ನಡೆಯಿತು.